ಶನಿವಾರ, ಸೆಪ್ಟೆಂಬರ್ 27, 2025

ಕೆಪಿಸಿಸಿ ಕಾರ್ಮಿಕ ಘಟಕದ ನಗರ ಬ್ಲಾಕ್ ಅಧ್ಯಕ್ಷರಾಗಿ ನದೀಮ್ ಬಾಷಾ ನೇಮಕ

ಕೆಪಿಸಿಸಿ ಕಾರ್ಮಿಕ ಘಟಕದ ಭದ್ರಾವತಿ ನಗರ ಬ್ಲಾಕ್ ಅಧ್ಯಕ್ಷರಾಗಿ ಇಂದಿರಾ ನಗರದ ನಿವಾಸಿ ನದೀಮ್ ಬಾಷಾರವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. 
ಭದ್ರಾವತಿ: ಕೆಪಿಸಿಸಿ ಕಾರ್ಮಿಕ ಘಟಕದ ನಗರ ಬ್ಲಾಕ್ ಅಧ್ಯಕ್ಷರಾಗಿ ಇಂದಿರಾ ನಗರದ ನಿವಾಸಿ ನದೀಮ್ ಬಾಷಾರವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. 
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಕೆ. ಪುಟ್ಟಸ್ವಾಮಿಗೌಡ ಮತ್ತು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್‌ರವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಆರ್. ರಾಮ್‌ಕುಮಾರ್ ನೇಮಕಗೊಳಿಸಿ ಆದೇಶಿಸಿದ್ದಾರೆ. 
ಪಕ್ಷದ ಸೂಚನೆ ಮತ್ತು ಆದೇಶಗಳ ಅನುಸಾರವಾಗಿ ನೀಡುವ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸುವ ಜೊತೆಗೆ ಪಕ್ಷದ ನೀತಿನಿರೂಪಣೆಗಳು ಉಲ್ಲಂಘನೆಯಾಗದಂತೆ ಎಚ್ಚರವಹಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ. 

ಅ.೧ರಂದು ಕಿರಿಯ ಪುಷ್ಪ ಸಂತ ತೆರೇಸರ ಶತಮಾನೋತ್ಸವ, ವಾರ್ಷಿಕ ಮಹೋತ್ಸವ

ಫಾ. ಸಂತೋಷ್ ಪೆರೇರಾರಿಂದ ಸೆ.೨೮ರಂದು ಧ್ವಜಾರೋಹಣ, ದಿವ್ಯ ಬಲಿಪೂಜೆ

ಭದ್ರಾವತಿ ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯ.  
    ಭದ್ರಾವತಿ : ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿರುವ ಕಿರಿಯ ಪುಷ್ಪ ಸಂತ ತೆರೇಸರ ಶತಮಾನೋತ್ಸವ ಮತ್ತು ದೇವಾಲಯದ ವಾರ್ಷಿಕ ಮಹೋತ್ಸವ ಅ.೧ರ ಬುಧವಾರ ವಿಜೃಂಭಣೆಯಿಂದ ನಡೆಯಲಿದೆ ಎಂದು ಧರ್ಮಕೇಂದ್ರದ ಗುರುಗಳಾದ ಫಾದರ್ ಪೌಲ್ ಕ್ರಾಸ್ಟ ತಿಳಿಸಿದ್ದಾರೆ. 
    ಪ್ರತಿ ವರ್ಷದಂತೆ ಈ ಬಾರಿ ಸಹ ದೇವಾಲಯದ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಾವಿನಕೆರೆ ಧರ್ಮ ಕೇಂದ್ರದ ಸಂತ ತೆರೇಸಾ ರವರಿಗೆ ಈ ವರ್ಷದ ವಾರ್ಷಿಕ ಮಹೋತ್ಸವ ಅರ್ಪಿಸಲಾಗಿದ್ದು, ಸಂತರ ೧೦೦ನೇ ವರ್ಷದ ಶತಮಾನೋತ್ಸವ ಸಂಭ್ರಮಾಚರಣೆ ಸಹ ಆಚರಿಸಲಾಗುತ್ತಿದೆ ಎಂದರು. 
    ಮೂರು ದಿನಗಳ ಭಕ್ತಿ ಕಾರ್ಯ : 
    ಸೆ.೨೮ರ ಭಾನುವಾರ ಬೆಳಗ್ಗೆ ೮ ಗಂಟೆಗೆ ಹಿರಿಯೂರಿನ ಕಿರಿಯ ಗುರು ಅಭ್ಯರ್ಥಿ ನಿಲಯದ ನಿರ್ದೇಶಕರಾದ ಫಾದರ್ ಸಂತೋಷ್ ಪೆರೇರಾರವರು ಸಂತ ತೆರೇಸಾರವರ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿರುವರು. ೨೯ರ ಸೋಮವಾರ ಸಂಜೆ ೫.೩೦ಕ್ಕೆ ಉಜ್ಜನಿಪುರ ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕರಾದ ಫಾದರ್ ನೀಲಗಳ್ ಕ್ರಿಸ್ತುರಾಜ್‌ರವರಿಂದ ಪೂಜಾ ವಿಧಿ-ವಿಧಾನಗಳು ನೆರವೇರಲಿದ್ದು, ೩೦ ಮಂಗಳವಾರ ಸಂಜೆ ೫:೩೦ಕ್ಕೆ ರಿದೆಂಥೋರಿಸ್ಟ್ ಸಭೆಯ ಗುರುಗಳಾದ ಫಾದರ್ ಅಶ್ವಿಲ್ ಡಯಾಸ್‌ರವರಿಂದ ಪೂಜಾ ವಿಧಿ-ವಿಧಾನ ನೆರವೇರಲಿದ್ದು, ನಂತರ ಗ್ರಾಮದ ಮುಖ್ಯಬೀದಿಗಳಲ್ಲಿ ಭವ್ಯ ತೇರಿನ ಮೆರವಣಿಗೆ ನಡೆಯಲಿದೆ. 
    ಶತಮಾನೋತ್ಸವದ ಹಬ್ಬ : 
    ಅ.೧ರಂದು ಸಂಜೆ ೫:೩೦ಕ್ಕೆ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋರವರಿಂದ ವಾರ್ಷಿಕೋತ್ಸವದ ಸಂಭ್ರಮಿಕ ಪೂಜಾ ವಿಧಿ-ವಿಧಾನಗಳು ನೆರವೇರಲಿದೆ. ನಂತರ ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳಿಗೆ ಮುಖ್ಯ ಬಸ್ ನಿಲ್ದಾಣದಿಂದ ಸಂಜೆ ೫ ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.
    ಮಾವಿನಕೆರೆ ಧರ್ಮಕೇಂದ್ರದ ಪಾಲಕಿ ಸಂತ ಕಿರಿಯ ಪುಷ್ಪ ಸಂತ ತೆರೇಸಾರವರು ಸಂತ ಪದವಿಗೇರಿದ ಶತಮಾನೋತ್ಸವದ ಸಂಭ್ರಮದಲ್ಲಿ ಈ ಮಹೋತ್ಸವ ಆಚರಿಸುತ್ತಿದ್ದು, ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕಾಗಿ ಧರ್ಮಕೇಂದ್ರದ ಗುರುಗಳು, ಧರ್ಮಭಗಿನಿಯರು, ಪದಾಧಿಕಾರಿಗಳು ಮತ್ತು ಭಕ್ತರು ಕೇಳಿಕೊಂಡಿದ್ದಾರೆ.

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವ್ಯವಸ್ಥೆ, ಸುಧಾರಣೆಗಳಿಂದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ

ಕಾರ್ಮಿಕರ ಸಹಾಯ ಕೇಂದ್ರ, ಆನ್‌ಲೈನ್ ಗೇಟ್ ಪ್ರವೇಶ ವ್ಯವಸ್ಥೆ ಉದ್ಘಾಟಿಸಿದ ಬಿ.ಎಲ್ ಚಂದ್ವಾನಿ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರ ಮತ್ತು ಆನ್‌ಲೈನ್ ಗೇಟ್ ಪ್ರವೇಶ ವ್ಯವಸ್ಥೆ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಉದ್ಘಾಟಿಸಿದರು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕರಿಗಾಗಿ ಸಾಕಷ್ಟು ವ್ಯವಸ್ಥೆ ಹಾಗು ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲಾ ಹಂತಗಳಲ್ಲಿ ಕೆಲಸ ಮಾಡುವುದನ್ನು ಸುಲಭಗೊಳಿಸಲು ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ಸರಳೀಕರಿಸಲು ಇದು ಸಹಾಯ ಮಾಡುತ್ತದೆ ಎಂದು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು. 
    ಅವರು ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರ ಮತ್ತು ಆನ್‌ಲೈನ್ ಗೇಟ್ ಪ್ರವೇಶ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದರು. ಗುತ್ತಿಗೆ ಕಾರ್ಮಿಕರ ಕುಂದು-ಕೊರತೆಗಳು, ಸಮಸ್ಯೆಗಳನ್ನು ಸಮಯಕ್ಕೆ ಅನುಗುಣವಾಗಿ ವ್ಯವಸ್ಥಿತ ರೀತಿಯಲ್ಲಿ ಪರಿಹರಿಸುವ ಗುರಿಯನ್ನು ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರ ಹೊಂದಿದೆ. ಈ ಕೇಂದ್ರದ ಮೇಲ್ವಿಚಾರಣೆಯನ್ನು ಮಾನವ ಸಂಪನ್ಮೂಲ ಇಲಾಖೆ ನಿರ್ವಹಿಸುತ್ತದೆ ಎಂದರು. 
    ಆನ್‌ಲೈನ್ ಗೇಟ್ ಪ್ರವೇಶ ವ್ಯವಸ್ಥೆಯಿಂದ ಕಾರ್ಮಿಕರಿಗೆ ಅನುಕೂಲವಾಗಲಿದ್ದು, ಅದರಲ್ಲೂ ಗುತ್ತಿಗೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಭದ್ರತಾ ಸಿಬ್ಬಂದಿಗಳಿಗೂ ಇದರಿಂದ ನೆರವಾಗಲಿದೆ ಎಂದರು. 
     ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ(ಸುರಕ್ಷತೆ ಮತ್ತು ಅಗ್ನಿಶಾಮಕ ಸೇವೆ) ಹರಿಶಂಕರ್,  ಮಹಾಪ್ರಬಂಧಕರು (ಸೇವೆಗಳು) ಟಿ. ರವಿಚಂದ್ರನ್,  . ಮಹಾಪ್ರಬಂಧಕರು(ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಸಹಾಯಕ ಮಹಾಪ್ರಬಂಧಕರು(ಕಂಪ್ಯೂಟರ್ ಮತ್ತು ಐಟಿ) ನಿತಿನ್ ಜೋಶ್, , ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಕುಥಲನಾಥನ್, ಉಪ ಪ್ರಬಂಧಕರು (ಹೆಚ್.ಆರ್) ಕೆ.ಎಸ್. ಶೋಭ, ಕಿರಿಯ ಪ್ರಬಂಧಕರು (ಹೆಚ್.ಆರ್ ಹೆಚ್.ಆರ್. ಎಲ್ & ಡಿ) ಎಮ್.ಎಲ್. ಯೋಗೀಶ್, ಇಂಜಿನಿಯರಿಂಗ್ ಅಸೋಸಿಯೇಟ್ಸ್(ಕಂಪ್ಯೂಟರ್ & ಐಟಿ) ಯಶವಂತಾಚಾರ್, ಭದ್ರತಾ ವಿಭಾಗದ ಅಸೋಸಿಯೇಟ್ಸ್ ರೇವಣಪ್ಪ ಮೂಡಿ, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಕಾಸ್ ಬಸೇರ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಗುತ್ತಿಗೆದಾರರನ್ನು ಪ್ರತಿನಿಧಿಸುವ ಗಿರೀಶ್, ಕರಿಬಸಪ್ಪ, ಎಸ್. ವೆಂಕಟೇಶ್, ಎಸ್.ಎಸ್ ಜಾವೇದ್ ಹಾಗು ಭದ್ರತಾ ವಿಭಾಗದ ಇನ್ನಿತರರು ಉಪಸ್ಥಿತರಿದ್ದರು. 

ವಿಐಎಸ್‌ಎಲ್ ನಿವೃತ್ತ ನೌಕರ ನಿಂಗಯ್ಯ ನಿಧನ

ನಿಂಗಯ್ಯ 
    ಭದ್ರಾವತಿ: ನಗರದ ಜನ್ನಾಪುರ ಕಿತ್ತೂರುರಾಣಿ ಚನ್ನಮ್ಮ ಬಡಾವಣೆ (ಕೆ.ಸಿ ಬ್ಲಾಕ್) ನಿವಾಸಿ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ನಿಂಗಯ್ಯ(೭೬) ಶುಕ್ರವಾರ ರಾತ್ರಿ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ ಹಾಗು ಮೊಮ್ಮಕ್ಕಳು ಇದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆಪಡೆದು ಮನೆಗೆ ಮನೆಗೆ ಹಿಂದಿರುಗಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ  ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಸಂಜೆ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು, ವಿಐಎಸ್‌ಎಲ್ ನಿವೃತ್ತ ನೌಕರರು ಸಂತಾಪ ಸೂಚಿಸಿದ್ದಾರೆ. 

ಶುಕ್ರವಾರ, ಸೆಪ್ಟೆಂಬರ್ 26, 2025

ಮೆಸ್ಕಾಂ ಕಛೇರಿ ಮಹಿಳಾ ಸಿಬ್ಬಂದಿಗಳಿಂದ ನವರಾತ್ರಿ : ಬಣ್ಣ ಬಣ್ಣದ ಉಡುಪುಗಳಿಂದ ಸಂಭ್ರಮ

ನವರಾತ್ರಿ ಅಂಗವಾಗಿ ಮೆಸ್ಕಾಂ ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳೊಂದಿಗೆ ಸಂಭ್ರಮಿಸಿದರು. 
    ಭದ್ರಾವತಿ : ನವರಾತ್ರಿ ಅಂಗವಾಗಿ ಮೆಸ್ಕಾಂ ಜೆಪಿಎಸ್ ಕಾಲೋನಿಯಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳೊಂದಿಗೆ ಸಂಭ್ರಮಿಸಿದರು. 
    ನವರಾತ್ರಿ ಆರಂಭಗೊಂಡ ದಿನದಿಂದಲೂ ಪ್ರತಿದಿನ ಒಂದೊಂದು ಬಣ್ಣದ ಉಡುಪುಗಳೊಂದಿಗೆ ಮಹಿಳಾ ಸಿಬ್ಬಂದಿಗಳು ನವ ದಿನಗಳ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಶ್ವೇತ ವರ್ಣ, ನೀಲಿ, ಹಸಿರು ಬಣ್ಣದ ಉಡುಪುಗಳಲ್ಲಿ ಸಂಭ್ರಮಿಸಿದ್ದು, ಈ ಮೂಲಕ ನವರಾತ್ರಿ ಆಚರಣೆಗೆ ಮತ್ತಷ್ಟು ಮೆರಗು ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ೭೫ನೇ ಜನ್ಮದಿನದ ಅಂಗವಾಗಿ ಸೆ.೨೭ರಂದು ಪ್ರಬುದ್ದರ ಗೋಷ್ಠಿ

ಪ್ರಧಾನಿ ನರೇಂದ್ರ ಮೋದಿ

    ಭದ್ರಾವತಿ : ಬಿಜೆಪಿ ಮಂಡಲದಿಂದ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನದ ಅಂಗವಾಗಿ ಸೆ.೨೭ರ ಶನಿವಾರ ಸಂಜೆ ೫.೪೫ಕ್ಕೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಪ್ರಬುದ್ದರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. 
    ನವ ಭಾರತದ ಆರ್ಥಿಕ ಸುಧಾರಣೆಗಳು ಕುರಿತು ಚರ್ಚೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಮತ್ತು ಡಿ.ಎಸ್ ಅರುಣ್ ಆಗಮಿಸಲಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಅಧ್ಯಕ್ಷತೆವಹಿಸಲಿದ್ದಾರೆ. ಮಂಡಲ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ, ಕೆ.ಎನ್ ಶ್ರೀಹರ್ಷ, ಸಾಗರ್ ಮತ್ತು ಭರತ್ ಆಗಮಿಸಲಿದ್ದಾರೆ. 

ಸೆ.೨೭ರಂದು ನ್ಯಾಯದ ಹರಿಕಾರ ಪ್ರವಾದಿ ಮಹಮ್ಮದ್



    ಭದ್ರಾವತಿ : ಪ್ರವಾದಿ ಮಹಮದ್ ಫೈಗಂಬರರ ಜನ್ಮದಿನೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಸೀರತ್ ಅಭಿಯಾನ -೨೦೨೫ ನ್ಯಾಯದ ಹರಿಕಾರ ಪ್ರವಾದಿ ಮಹಮ್ಮದ್(ಸ) ಕಾರ್ಯಕ್ರಮ ಸೆ.೨೭ರ ಶನಿವಾರ ನಗರದ ಬಿ.ಎಚ್ ರಸ್ತೆ, ತಿಮ್ಮಯ್ಯ ಮಾರುಕಟ್ಟೆ ಸಮೀಪದ ಆಯಿಷಾ ಮಸೀದಿಯಲ್ಲಿ ಏರ್ಪಡಿಸಲಾಗಿದೆ. 
    ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ತಾಲೂಕು ಶಾಖೆಯಿಂದ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ಜನಾಬ್ ರಿಯಾಜ್ ಅಹಮದ್ ರೋಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಹಳೇನಗರ ಪೊಲೀಸ್ ಠಾಣಾ ನಿರೀಕ್ಷಕ ಸುನೀಲ್ ಬಿ. ತೇಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ತಾಲೂಕು ಶಾಖೆ ಅಧ್ಯಕ್ಷ ಜನಾಬ್ ಮೌಲಾನಾ ಸುಲ್ತಾನ್ ಬೇಗ್ ಮತ್ತು ಜಿಲ್ಲಾ ಸಂಚಾಲಕ ಜನಾಬ್ ಸಲೀಮ್ ಉಮ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿರಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.