ಭದ್ರಾವತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಕೇಂದ್ರ ಕಾರ್ಯಾಲಯ ಉದ್ಘಾಟನೆ ಹಾಗು ರಾಜ್ಯ ಪದಾಧಿಗಳ ಪದಗ್ರಹಣ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮ ಭಾನುವಾರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ : ಯಾರು ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದಾರೋ, ಅನ್ಯಾಯಕ್ಕೆ ಒಳಗಾಗಿದ್ದಾರೋ ಅಂತಹವರ ಪರವಾಗಿ ಹೋರಾಟ ರೂಪಿಸುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಭಾನುವಾರ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಕೇಂದ್ರ ಕಾರ್ಯಾಲಯ ಉದ್ಘಾಟನೆ ಹಾಗು ರಾಜ್ಯ ಪದಾಧಿಗಳ ಪದಗ್ರಹಣ ಮತ್ತು ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಕೇವಲ ದಲಿತ ಸಮುದಾಯದವರು ಮಾತ್ರ ಶೋಷಣೆಗೆ ಒಳಗಾಗಿಲ್ಲ. ಎಲ್ಲಾ ಧರ್ಮ, ಜಾತಿ, ಸಮುದಾಯಗಳಲ್ಲೂ ಶೋಷಣೆ, ಅನ್ಯಾಯಕ್ಕೆ ಒಳಗಾದವರು ಇದ್ದಾರೆ. ಇಂತಹವರ ಪರವಾಗಿ ಹೋರಾಟ ರೂಪಿಸುವ ಮೂಲಕ ಅವರಿಗೆ ನ್ಯಾಯ ಕಲ್ಪಿಸಿ ಕೊಡಬೇಕಾಗಿದೆ ಎಂದರು.
ಪ್ರಸ್ತುತ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಜಗಜ್ಯೋತಿ ಬಸವಣ್ಣ, ಡಾ. ಬಿ.ಆರ್ ಅಂಬೇಡ್ಕರ್, ಪ್ರೊ. ಬಿ. ಕೃಷ್ಣಪ್ಪನವರ ಆಶಯಗಳಂತೆ ಮುನ್ನಡೆಯುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಎಲ್ಲಾ ಧರ್ಮ, ಜಾತಿ, ಸಮುದಾಯಗಳ ಶೋಷಿತರ ಧ್ವನಿಯಾಗಿ ಮಾನವ ಧರ್ಮ ಎತ್ತಿ ಹಿಡಿಯುವಂತಾಗಲಿ. ಇಂತಹ ಕಾರ್ಯಕ್ಕೆ ನಾನು ಹಾಗು ನನ್ನ ಕುಟುಂಬ ವರ್ಗದವರು ಸಂಪೂರ್ಣವಾಗಿ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಈ ಭೂಮಿ ಮೇಲೆ ಇರುವುದು ಒಂದೇ ಧರ್ಮ. ಮಾನವರಾದ ನಾವೆಲ್ಲರೂ ಸಹ ಒಂದೇ. ಆದರೆ ಸಮಾಜದಲ್ಲಿ ಧರ್ಮ, ಜಾತಿ ಮತ್ತು ಸಮುದಾಯಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಂಘರ್ಷ ಉಂಟು ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದರು.
ಬಸವಣ್ಣ, ಅಂಬೇಡ್ಕರ್ ಮತ್ತು ಪ್ರೊ. ಬಿ. ಕೃಷ್ಣಪ್ಪ ಸೇರಿದಂತೆ ಮಹಾನ್ ವ್ಯಕ್ತಿಗಳ ಆದರ್ಶಗಳು, ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು, ಸಂವಿಧಾನದ ರಚನೆಯಿಂದಾಗಿ ನಾವೆಲ್ಲರೂ ಇಂದು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಸ್ತುತ ಅಸ್ತಿತ್ವಕ್ಕೆ ಬಂದಿರುವ ಸಮನ್ವಯ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದರು.
ಭದ್ರಾವತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಕೇಂದ್ರ ಕಾರ್ಯಾಲಯ ಉದ್ಘಾಟನೆ ಹಾಗು ರಾಜ್ಯ ಪದಾಧಿಗಳ ಪದಗ್ರಹಣ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಭಾನುವಾರ ಜಾನಪದ ಕಲಾವಿದ ಶಿಕ್ಷಕ ಎಂ.ಆರ್ ರೇವಣಪ್ಪರವರಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.
ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಡಿಎಸ್‌ಎಸ್ ಸಂಸ್ಥಾಪಕ ಸದಸ್ಯ, ನಿವೃತ್ತ ಮುಖ್ಯ ಶಿಕ್ಷಕ ಡಿ. ಕರಿಯಪ್ಪ, ಶಿಕ್ಷಕರಾದ ಎಚ್.ಎನ್ ನರಸಿಂಹಮೂರ್ತಿ, ಸಿ. ಚನ್ನಪ್ಪ, ರಾಧಾಬಾಯಿ ಹಾಜ್ಯನಾಯ್ಕ್, ಶಾರದ ಪ್ರೇಮ್ ಕುಮಾರ್ ಮತ್ತು ಎಸ್. ಭಾರತಿ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯ ಪದಾಧಿಕಾರಿ ಭಾರತಿ ಗೋವಿಂದಸ್ವಾಮಿ, ಗಂಗಾಮತಸ್ಥ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆರ್ ಯಲ್ಲಪ್ಪ, ಶಿಕ್ಷಕರ ಸಂಘದ ಮುಖಂಡ ಬಸವಂತರಾವ್ ದಾಳೆ, ಕೆಡಿಪಿ ಸದಸ್ಯ ರಾಜೇಂದ್ರ, ಸಮನ್ವಯ ಸಮಿತಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್ ಅಧ್ಯಕ್ಷತೆ ವಹಿಸಿದ್ದರು. ದಲಿತ ನೌಕರರ ಮುಖಂಡ ಎನ್. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಯು. ಮಹಾದೇವಪ್ಪ ಸ್ವಾಗತಿಸಿ, ದಯಾನಂದ್ ಸಾಗರ್ ನಿರೂಪಿಸಿ, ದಲಿತ ಮುಖಂಡ ಸುನಿಲ್ ಕೋರಿ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಲಾಯಿತು. ಹೊಸನಗರ ಮಾದಾಪುರ ಶ್ರೀ ಶನಿಪರಮೇಶ್ವರ ಯುವಕರ ಸಂಘದ ಅಂತರಾಷ್ಟ್ರೀಯ ಜಾನಪದ ಕಲಾವಿದರು, ಗಿರೀಶ್‌ಕುಮಾರ್ ಮತ್ತು ಸಂಗಡಿಗರಿಂದ ಡೊಳ್ಳು ಕುಣಿತ, ಸುಗ್ಗಿ ಕುಣಿತ ಮತ್ತು ಕೋಲಾಟದೊಂದಿಗೆ ಮೆರವಣಿಗೆ ನಡೆಯಿತು.
ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಬೇಕು...ಶಿಕ್ಷಕ ಹಾಗು ಜಾನಪದ ಕಲಾವಿದರಾದ ಎಂ.ಆರ್ ರೇವಣಪ್ಪರವರು ಅದ್ಭುತ ಕಲಾವಿದರಾಗಿದ್ದು, ಈಗಾಗಲೇ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿಕ್ಷಣ ಮತ್ತು ಕಲಾ ಕ್ಷೇತ್ರದಲ್ಲಿ ಅಪಾರವಾದ ಪ್ರತಿಭೆ ಹೊಂದಿದ್ದಾರೆ. ಇಂತಹ ಪ್ರತಿಭಾವಂತರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಬೇಕು. ಆಗ ಮಾತ್ರ ಇವರ ಪ್ರತಿಭೆಗೆ ಗೌರವ ಸಲ್ಲುತ್ತದೆ.- ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.
----------------------------------------------------------------------------------------------------------
ಪ್ರೊ. ಬಿ. ಕೃಷ್ಣಪ್ಪ ಪ್ರತಿಮೆ ಸ್ಥಾಪನೆ :ಕ್ಷೇತ್ರದಲ್ಲಿ ದಲಿತ ಚಳುವಳಿ ಹುಟ್ಟುಹಾಕುವ ಮೂಲಕ ಶೋಷಿತರ ಧ್ವನಿಯಾಗಿದ್ದ ಹಾಗು ಉಪನ್ಯಾಸಕರಾಗಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದ ಪ್ರೊ. ಬಿ. ಕೃಷ್ಣಪ್ಪರವರು ಕೊಡುಗೆ ಸ್ಮರಸಿ ಅವರನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ ನಗರದ ಮಿಲ್ಟ್ರಿಕ್ಯಾಂಪ್ ಬೈಪಾಸ್ ವೃತ್ತಕ್ಕೆ ಅವರ ಹೆಸರನ್ನು ನಾಮಕರಣಗೊಳಿಸಲಾಗಿದೆ. ಪ್ರಸ್ತುತ ಬೈಪಾಸ್ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದ್ದು, ಪೂರ್ಣಗೊಂಡ ಅವರ ಪ್ರತಿಮೆಯನ್ನು ಅಲ್ಲಿ ಅನಾವರಣಗೊಳಿಸಲಾಗುವುದು.- ಬಿ.ಕೆ ಮೋಹನ್, ನಗರಸಭೆ ಹಿರಿಯ ಸದಸ್ಯರು, ಭದ್ರಾವತಿ.