ಗುರುವಾರ, ಅಕ್ಟೋಬರ್ 2, 2025

ಜಾನಪದ ಕಲಾವಿದ, ಶಿಕ್ಷಕ ಎಂ.ಆರ್ ರೇವಣಪ್ಪರಿಗೆ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ

ಕೆಆರ್‌ಐಡಿಎಲ್ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ವಿ. ವಿನೋದ್ ಪ್ರಶಸ್ತಿ ಪ್ರದಾನ 

ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪರವರಿಗೆ ಕರ್ನಾಟಕ ದಲಿತ ಸಮನ್ವಯ ಸಮಿತಿಯಿಂದ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
    ಭದ್ರಾವತಿ : ತಾಲೂಕಿನ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪರವರಿಗೆ ಕರ್ನಾಟಕ ದಲಿತ ಸಮನ್ವಯ ಸಮಿತಿಯಿಂದ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
     ಕರ್ನಾಟಕ ದಲಿತ ಸಮನ್ವಯ ಸಮಿತಿ ಕೇಂದ್ರ ಕಾರ್ಯಾಲಯ ಉದ್ಘಾಟನೆ ಹಾಗು ರಾಜ್ಯ ಪದಾಧಿಗಳ ಪದಗ್ರಹಣ ಮತ್ತು ನಾಮಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್‌ರವರು ಎಂ.ಆರ್ ರೇವಣಪ್ಪ-ಎಂ.ರೇಣುಕ ದಂಪತಿಗೆ `ಕರ್ನಾಟಕ ಜಾನಪದ ರತ್ನ' ಪ್ರಶಸ್ತಿ ನೀಡಿ ಗೌರವಿಸಿದರು. 
    ಬಿ.ಕೆ ಸಂಗಮೇಶ್ವರ್ ಮಾತನಾಡಿ, ಶಿಕ್ಷಕ ಹಾಗು ಜಾನಪದ ಕಲಾವಿದರಾದ ಎಂ.ಆರ್ ರೇವಣಪ್ಪರವರು ಅದ್ಭುತ ಕಲಾವಿದರಾಗಿದ್ದು, ಈಗಾಗಲೇ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿಕ್ಷಣ ಮತ್ತು ಕಲಾ ಕ್ಷೇತ್ರದಲ್ಲಿ ಅಪಾರವಾದ ಪ್ರತಿಭೆ ಹೊಂದಿದ್ದಾರೆ. ಇಂತಹ ಪ್ರತಿಭಾವಂತರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಬೇಕು. ಆಗ ಮಾತ್ರ ಇವರ ಪ್ರತಿಭೆಗೆ ಗೌರವ ಸಲ್ಲುತ್ತದೆ ಎಂದರು.  
   ಎಂ.ಆರ್ ರೇವಣಪ್ಪ : 
  ಎಂ.ಆರ್ ರೇವಣಪ್ಪರವರು ಹೊಸನಗರ ತಾಲೂಕು, ಕೆರೆಹಳ್ಳಿ ಹೋಬಳಿ, ಕೆಂಪನಾಲ ಅಂಚೆ, ಮಾದಾಪುರ ಎಂಬ ಒಂದು ಕುಗ್ರಾಮದಲ್ಲಿ ರಾಮಣ್ಣ ಮತ್ತು ಭರ್ಮಮ್ಮ ದಂಪತಿಗಳ ಏಳು ಜನ ಮಕ್ಕಳಲ್ಲಿ ಕೊನೆಯ ಮಗನಾಗಿ ೦೧-೦೬-೧೯೭೧ರಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣ ತಮ್ಮ ಹುಟ್ಟೂರಿನಲ್ಲಿ ಕಲಿತು. ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಸಾಗರ ತಾಲೂಕಿನ ಆನಂದಪುರಂನಲ್ಲಿ ಪಡೆದರು. ೧೯೯೮ರಲ್ಲಿ ಬಿ.ಸಿ.ಹೆಚ್ ತರಬೇತಿ ಶಿವಮೊಗ್ಗ ಡಯಟ್‌ನಲ್ಲಿ ಪಡೆದು ದಿನಾಂಕ ೧೯೯೮ರಲ್ಲಿ ತೀರ್ಥಹಳ್ಳಿ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಳಸುರಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. 
ರೇವಣಪ್ಪ ಕುಟುಂಬ್ಥರು ಮೂಲತಃ ಜಾನಪದ ಕಲಾವಿದರಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮೀಣ ಸೊಗಡಿನ ಜಾನಪದ ಕಲೆಗಳಿಗೆ ಬಾಲ್ಯದಿಂದಲೇ ಆಕರ್ಷಣೆಗೊಂಡು ವಿದ್ಯಾಭ್ಯಾಸದ ಜೊತೆಜೊತೆಗೆ ಜಾನಪದ ಕಲೆಗಳನ್ನು ಮೈಗೂಡಿಸಿಕೊಂಡು ರಾಜ್ಯ. ರಾಷ್ಟ್ರ. ಹಾಗೂ ಅಂತರಾಷ್ಟ್ರೀಯ ಕಾರ್ಯಕ್ರರ್ಮಗಳಲ್ಲಿ ಡೊಳ್ಳು ಕುಣಿತ, ಸುಗ್ಗಿ ಕುಣಿತ, ಕೋಲಾಟ ಪ್ರಕಾರಗಳನ್ನು ಪ್ರದರ್ಶನಮಾಡಿ ಕೀರ್ತಿ ತಂದಿದ್ದಾರೆ. 
   ಸರ್ಕಾರಿ ಶಾಲೆಗಳ ಸಹಸ್ರಾರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಜಾನಪದ ಕಲೆಗಳನ್ನು ಕಲಿಸುವುದರ ಮೂಲಕ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 
  ಇವರ ಸಾಧನೆ ಗುರುತಿಸಿ ಶಿಕ್ಷಣ ಇಲಾಖೆಯಿಂದ ೨೦೦೮-೦೯ನೇ ಸಾಲಿನಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗು ೨೦೧೮-೧೯ನೇ ಸಾಲಿನ "ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.  ೨೦೦೮-೦೯ರಲ್ಲಿ ಡಾ. ರಾಜ್‌ಕುಮಾರ್ ರಾಜ್ಯೋತ್ಸವ ಪ್ರಶಸ್ತಿಯನ್ನು ರೇವಣಪ್ಪ ಪಡೆದುಕೊಂಡಿದ್ದಾರೆ. ಇವರ ಜಾನಪದ ಕಲಾಸೇವೆಯನ್ನು ಗುರುತಿಸಿ ತಮಿಳುನಾಡಿನ ಊಟಿಯಲ್ಲಿ ನಡೆದ "ಇಂಟರ್‌ನ್ಯಾಷನಲ್ ಪೀಸ್ ಯುನಿವರ್ಸಿಟಿ", ಜರ್ಮನ್ ೨೦೨೨-೨೩ ಸಾಲಿನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುತ್ತಾರೆ. 
   ವಿಶೇಷವೆಂದರೆ ಶಿವಮೊಗ್ಗದ ಮಲವಗೊಪ್ಪದ "ಕೇಂದ್ರ ಕಾರಾಗೃಹ"ದಲ್ಲಿ ಬಂದಿನಿವಾಸಿಗಳಿಗೆ ೧೦ ದಿನಗಳ ವರೆಗೆ ನಡೆದ ಜಾನಪದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಭೇತಿ ನೀಡಿ ಬಂದಿನಿವಾಸಿಗಳ ಹೃದಯದಲ್ಲಿ ರೇವಣಪ್ಪರವರು ಅಚ್ಚಳಿಯದೆ ಉಳಿದಿರುತ್ತಾರೆ.  ಇವರ ಪತ್ನಿ ಎಂ. ರೇಣುಕರವರು  ಸಹ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಮಕ್ಕಳಾದ ರೋಚನ್ ಆರ್ ದೊಡ್ಡನೆ ಮತ್ತು ರೋಹನ್ ಆರ್ ದೊಡ್ಡನೆರವರು ವಿದ್ಯಾಭ್ಯಾಸ ಮಾಡುತ್ತಿದಾರೆ. 
   ರೇವಣಪ್ಪರವರು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಹಾಗು ಇನ್ನಿತರ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಹಾಗು ಜಾನಪದ ಕ್ಷೇತ್ರದಲ್ಲಿ ಇವರ ಕೊಡುಗೆ ಅನನ್ಯವಾಗಿದೆ. 
   ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯ ಪದಾಧಿಕಾರಿ ಭಾರತಿ ಗೋವಿಂದಸ್ವಾಮಿ, ಗಂಗಾಮತಸ್ಥ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆರ್ ಯಲ್ಲಪ್ಪ, ಶಿಕ್ಷಕರ ಸಂಘದ ಮುಖಂಡ ಬಸವಂತರಾವ್ ದಾಳೆ, ಕೆಡಿಪಿ ಸದಸ್ಯ ರಾಜೇಂದ್ರ, ದಲಿತ ನೌಕರರ ಮುಖಂಡ ಎನ್. ಮಂಜುನಾಥ್, ಶಿಕ್ಷಕರಾದ ಯು. ಮಹಾದೇವಪ್ಪ, ದಯಾನಂದ್ ಸಾಗರ್, ದಲಿತ ಮುಖಂಡ ಸುನಿಲ್ ಕೋರಿ, ಸಮನ್ವಯ ಸಮಿತಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ವಿಜೃಂಭಣೆಯಿಂದ ಜರುಗಿದ ಮಾವಿನಕೆರೆ ದೇವಾಲಯದ ವಾರ್ಷಿಕೋತ್ಸವ

ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಮೈಸೂರು ಧರ್ಮ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಭದ್ರಾವತಿ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸಾರ ದೇವಾಲಯದ ಭಕ್ತರ ಪರವಾಗಿ ಗುರುಗಳು ಮತ್ತು ಪದಾಧಿಕಾರಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ : ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸಾರ ಶತಮಾನೋತ್ಸವ ಮತ್ತು ದೇವಾಲಯದ ವಾರ್ಷಿಕ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. 
    ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಸಂಜೆ ದಿವ್ಯ ಬಲಿ ಪೂಜೆ ಮತ್ತು ಪೂಜಾ ವಿಧಿ-ವಿಧಾನ ನೆರವೇರಿಸಿದರು.  ಶಿವಮೊಗ್ಗ ಧರ್ಮ ಕ್ಷೇತ್ರದ ಕುಲಪತಿ ಫಾದರ್ ಸ್ಟಿಫನ್ ಅಲ್ಬುಕಾರ್ಕ್ ಮತ್ತು  ಧರ್ಮ ಕ್ಷೇತ್ರದ ಅನೇಕ ಧರ್ಮ ಗುರುಗಳೊಂದಿಗೆ ಧರ್ಮ ಕೇಂದ್ರದ ಗುರುಗಳಾದ ಫಾದರ್ ಪೌಲ್ ಕ್ರಾಸ್ತ, ಧರ್ಮಕೇಂದ್ರದ ಪದಾಧಿಕಾರಿಗಳು ಹಾಗು ಭಕ್ತರು ಪಾಲ್ಗೊಂಡಿದ್ದರು.
    ಮೈಸೂರು ಧರ್ಮ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುತ್ತಿರುವ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರನ್ನು ದೇವಾಲಯದ ಭಕ್ತರ ಪರವಾಗಿ ಗುರುಗಳು ಮತ್ತು ಪದಾಧಿಕಾರಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.

ನಾಡಹಬ್ಬ ದಸರಾ ಅದ್ದೂರಿ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಅಲಂಕೃತಗೊಂಡ ದೇವಾನುದೇವತೆಗಳು, ಬಾಲ್ಯವಿವಾಹ ಜಾಗೃತಿ, ಗಮನ ಸೆಳೆದ ನವದುರ್ಗಿಯರು

ಭದ್ರಾವತಿ ನಗರಸಭೆಯಿಂದ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉತ್ಸವ ಮೆರವಣೆಗೆಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಚಾಲನೆ ನೀಡಿದರು. 
    ಭದ್ರಾವತಿ : ನಗರಸಭೆಯಿಂದ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉತ್ಸವ ಮೆರವಣೆಗೆಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಚಾಲನೆ ನೀಡಿದರು. 
    ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಜೆ ಸುಮಾರು ೪.೪೫ರ ಸಮಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಹಾಗು ನಂದಿ ಧ್ವಜಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್ ಹೇಮಂತ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್,  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆಯಿಂದ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉತ್ಸವ ಮೆರವಣೆಗೆಗೆ ಸುಮಾರು ೪೦ಕ್ಕೂ ಹೆಚ್ಚು ಅಲಂಕೃತಗೊಂಡ ದೇವಾನುದೇವತೆಗಳು ಪಾಲ್ಗೊಂಡಿದ್ದವು. 
    ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ರಾಮೇಶ್ವರಸ್ವಾಮಿ, ಶ್ರೀ ಹಳದಮ್ಮ ದೇವಿ, ಶ್ರೀ ಕಾಳಿಕಾಂಬ ದೇವಿ, ಶ್ರೀ ಕೋಟೆ ಬಸವಣ್ಣ ಸ್ವಾಮಿ, ಮಹಾತ್ಮಗಾಂಧಿ ರಸ್ತೆ, ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ, ಹೊಸಮನೆ ವಿಜಯನಗರ ಶ್ರೀ ಶಿವಶಕ್ತಿ ಅಂಗಾಳ ಮರಮೇಶ್ವರಿ, ಭೂತನಗುಡಿ ಶ್ರೀ ಮಹಾಗಣಪತಿ, ಶ್ರೀಶನೇಶ್ವರ ಸ್ವಾಮಿ, ಶ್ರೀ ಕೆಂಚಮ್ಮ ಮತ್ತು ಭೂತಪ್ಪ ಸ್ವಾಮಿ, ಜಟ್‌ಪಟ್ ಆಶ್ರಯ ಕಾಲೋನಿ ಶ್ರೀ ಭಾವಿರುದ್ರ ವರಗುರು ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಭದ್ರಾಕಾಳಮ್ಮ ದೇವಿ, ಭೋವಿ ಕಾಲೋನಿ ಶ್ರೀ ಪಿಳ್ಳಗಮ್ಮ ದೇವಿ, ಶ್ರೀ ಸವದತ್ತಿ ಯಲ್ಲಮ್ಮ, ಶ್ರೀ ಶೆಟ್ಟಮ್ಮದೇವಿ, ಶ್ರೀ ಲಕ್ಷ್ಮಮ್ಮ ದೇವಿ, ಶ್ರೀ ಸಿಗಂದೂರು ಚೌಡೇಶ್ವರಿ, ಶ್ರೀ ಕಾಲರಮ್ಮ ದೇವಿ, ಕುಕ್ಕುವಾಡೇಶ್ವರಿ ದೇವಿ, ಶ್ರೀ ಕೋಟೆ ಮಾರಿಯಮ್ಮ ದೇವಿ, ದಾನವಾಡಮ್ಮ, ತಮ್ಮಣ್ಣ ಕಾಲೋನಿ ಶ್ರೀ ಚೌಡೇಶ್ವರಿ ದೇವಿ, ಸಂತೇ ಮೈದಾನದ ಶ್ರೀ ಸುಂಕಲಮ್ಮ ದೇವಿ, ಜನ್ನಾಪುರ ಪ್ಲೇಗ್ ಮಾರಿಯಮ್ಮ,  ವಿಜಯನಗರ ಶ್ರೀ ಶನಿದೇವರು, ತಮ್ಮಣ್ಣ ಕಾಲೋನಿ ಮರದಮ್ಮ ದೇವಿ, ಚಾಮೇಗೌಡ ಏರಿಯಾ, ಮೀನುಗಾರರ ಬೀದಿ, ಜನ್ನಾಪುರ ಶ್ರೀ ಮಾರಿಯಮ್ಮ ದೇವಿ, ಚನ್ನಗಿರಿ ರಸ್ತೆ ಶ್ರೀ ಮಾರಿಕಾಂಬ ದೇವಿ, ನ್ಯೂಟೌನ್ ಶ್ರೀ ಮಾತಂಗಮ್ಮ ದೇವಿ, ಹಳೇನಗರ ಉಪ್ಪಾರಕೇರಿ ಶ್ರೀ ಅಂತರಘಟ್ಟಮ್ಮ, ಗೌಳಿಗರ ಬೀದಿ ಶ್ರೀ ರಾಮೇಶ್ವರ ಸ್ವಾಮಿ, ದೊಣಬಘಟ್ಟ ರಸ್ತೆ ಶ್ರೀ ರಂಗನಾಥ ಸ್ವಾಮಿ, ಶಿವರಾಮನಗರ ಶ್ರೀ ಯಲ್ಲಮ್ಮ ದೇವಿ, ಗೌಳಿಗರ ಬೀದಿ ಶ್ರೀ ಕರುಮಾರಿಯಮ್ಮ ದೇವಿ, ಬಸವೇಶ್ವರ ವೃತ್ತದ ಶ್ರೀ ಕುರುಪೇಶ್ವರಿ ದೇವಿ, ಶ್ರೀ ಕುಕ್ಕುವಾಡೇಶ್ವರಿ ದೇವಿ, ಹೊಸಮನೆ ಶ್ರೀ ಕೆರೆಕೋಡಮ್ಮ ದೇವಿ, ರಂಗಪ್ಪ ವೃತ್ತ ಗುಳ್ಳಮ್ಮ ದೇವಿ, ಅಂಬೇಡ್ಕರ್ ನಗರ(ಕಂಚಿನ ಬಾಗಿಲು ವೃತ್ತ) ದುರ್ಗಾಂಬಾ ದೇವಿ, ದುರ್ಗಿನಗರದ ಶ್ರೀ ದುರ್ಗಮ್ಮ ದೇವಿ, ಜೈಭೀಮ್ ನಗರದ ಶ್ರೀ ದೊಡ್ಡಮ್ಮ ದೇವಿ, ಕಂಚಿನಬಾಗಿಲು ಮತ್ತು ಬಿ.ಎಚ್ ರಸ್ತೆ ಶ್ರೀ ಚೌಡೇಶ್ವರಿ ದೇವಿ ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ದೇವಸ್ಥಾನಗಳ ಅಲಂಕೃತಗೊಂಡ ದೇವಾನುದೇವತೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕಣ್ಮನ ಸೆಳೆದವು.


ಭದ್ರಾವತಿ ನಗರಸಭೆಯಿಂದ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉತ್ಸವ ಮೆರವಣೆಗೆಯಲ್ಲಿ ಬಾರಂದೂರು ಹಳ್ಳಿಕೆರೆ ಡೊಮಿನಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ಬಾಲ್ಯವಿವಾಹ ಕುರಿತು ಜಾಗೃತಿ ಮೂಡಿಸುವ ಸ್ತಬ್ದ ಚಿತ್ರ ಈ ಬಾರಿ ವಿಶೇಷವಾಗಿ ಕಂಡು ಬಂದಿತು.    
    ಡೊಳ್ಳು ಕುಣಿತ, ವೀರಗಾಸೆ, ಚಂಡೆ ವಾದ್ಯ, ಗಾರುಡಿ ಗೊಂಬೆ ಪ್ರದರ್ಶನ, ಬ್ಯಾಂಡ್‌ಸೆಟ್, ಗೊರವ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು.  
    ಗಾಂಧಿನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ನವದುರ್ಗಿಯರ ವೇಷದಲ್ಲಿ ಗಮನ ಸೆಳೆದರು. ಬಾರಂದೂರು ಹಳ್ಳಿಕೆರೆ ಡೊಮಿನಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ಬಾಲ್ಯವಿವಾಹ ಕುರಿತು ಜಾಗೃತಿ ಮೂಡಿಸುವ ಸ್ಥಬ್ದ ಚಿತ್ರ ಈ ಬಾರಿ ಮೆರವಣಿಗೆಯಲ್ಲಿ ವಿಶೇಷವಾಗಿ ಕಂಡು ಬಂದಿತು.  ಸಿಂಹಾಸಿನಿಯಾದ ಚಾಮುಂಡೇಶ್ವರಿ ದೇವಿ ರೂಪದಲ್ಲಿ ಬಿ.ಎಚ್ ರಸ್ತೆ, ಶಂಕರ್ ಚಿತ್ರಮಂದಿರ ಸಮೀಪದ ಶ್ರೀ ವಿಶ್ವಸ್ವರೂಪಿಣಿ ಮಾರಿಯಮ್ಮ ದೇವಿ ಅಲಂಕಾರ ಎಲ್ಲರನ್ನು ಆಕರ್ಷಿಸಿತು.  
ಮೆರವಣಿಗೆ ಬಿ.ಎಚ್ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ ಮೂಲಕ ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ತಲುಪಿ ತಾಲೂಕು ಕಛೇರಿ ರಸ್ತೆ ಮೂಲಕ ಕನಕಮಂಟಪ ಮೈದಾನದವರೆಗೂ ಸಾಗಿತು. ನಂತರ ಬನ್ನಿಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನಾಡಹಬ್ಬ ದಸರಾ ಕುರಿತು ಮಾತನಾಡಿದರು. ತಹಸೀಲ್ದಾರ್ ಪರುಸಪ್ಪ ಕುರುಬರ ಬನ್ನಿ ಮುಡಿಯುವ ಮೂಲಕ ಬನ್ನಿ ವಿತರಿಸಿ ಹಬ್ಬದ ಶುಭಕೋರಿದರು. ಕೊನೆಯಲ್ಲಿ ರಾವಣನ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಭದ್ರಾವತಿ ನಗರಸಭೆಯಿಂದ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉತ್ಸವ ಮೆರವಣೆಗೆಯಲ್ಲಿ ಗಾಂಧಿನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ನವದುರ್ಗಿಯರ ವೇಷದಲ್ಲಿ ಗಮನ ಸೆಳೆದರು.
    ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಚುನಾಯಿತ ಹಾಗು ನಾಮನಿರ್ದೇಶಿತ ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ವಿವಿಧ ದೇವಸ್ಥಾನಗಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಅರ್ಚಕರು, ಗಣ್ಯರು ಸೇರಿದಂತೆ ಸ್ಥಳೀಯರು ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.   
 

ಭದ್ರಾವತಿ ನಗರಸಭೆಯಿಂದ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉತ್ಸವ ಮೆರವಣೆಗೆಯಲ್ಲಿ ಸಿಂಹಾಸಿನಿಯಾದ ಚಾಮುಂಡೇಶ್ವರಿ ದೇವಿ ರೂಪದಲ್ಲಿ ಬಿ.ಎಚ್ ರಸ್ತೆ, ಶಂಕರ್ ಚಿತ್ರಮಂದಿರ ಸಮೀಪದ ಶ್ರೀ ವಿಶ್ವಸ್ವರೂಪಿಣಿ ಮಾರಿಯಮ್ಮ ದೇವಿ ಅಲಂಕಾರ ಎಲ್ಲರನ್ನು ಆಕರ್ಷಿಸಿತು.  

ಅ.6ರವರೆಗೆ ರಾಜ್ಯಮಟ್ಟದ ದಸರಾ ಕಪ್–2025 ಕ್ರಿಕೆಟ್ ಪಂದ್ಯಾವಳಿ

ಭದ್ರಾವತಿ ನಗರದ ರಘುವೀರ್ ಕ್ರಿಕೆಟ್ ಅಕಾಡೆಮಿಯಿಂದ ಯುವ ಆಟಗಾರರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ರಾಜ್ಯಮಟ್ಟದ ದಸರಾ ಕಪ್–2025 ಕ್ರಿಕೆಟ್ ಪಂದ್ಯಾವ  

ಭದ್ರಾವತಿ: ನಗರದ ರಘುವೀರ್ ಕ್ರಿಕೆಟ್ ಅಕಾಡೆಮಿಯಿಂದ ಯುವ ಆಟಗಾರರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ರಾಜ್ಯಮಟ್ಟದ ದಸರಾ ಕಪ್–2025 ಕ್ರಿಕೆಟ್ ಪಂದ್ಯಾವಳಿ ಅ.6ರವರೆಗೆ ಆಯೋಜಿಸಲಾಗಿದೆ.
      12 ರಿಂದ 14 ವರ್ಷದೊಳಗಿನ ಹಾಗೂ 14 ರಿಂದ 16 ವರ್ಷದೊಳಗಿನ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ರಾಜ್ಯದ ವಿವಿಧ ನಗರಗಳಿಂದ  ತಂಡಗಳು ಭಾಗವಹಿಸಿವೆ. ವಿ.ಐ.ಎಸ್.ಎಲ್ ಮತ್ತು ಎಂ.ಪಿ.ಎಂ ಕ್ರೀಡಾಂಗಣ ಸೇರಿದಂತೆ ನಗರದ ನಾಲ್ಕು ಪ್ರಮುಖ ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು, ಇದು ಯುವ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದು ಅಕಾಡೆಮಿ ತಿಳಿಸಿದೆ.

ಮಂಗಳವಾರ, ಸೆಪ್ಟೆಂಬರ್ 30, 2025

ನಾಡಹಬ್ಬ ದಸರಾ ಆಚರಣೆ : ಶಾಸಕ ಸಂಗಮೇಶ್ವರ್‌ಗೆ ಗೌರವ ಸನ್ಮಾನ

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಗರಸಭೆಯಿಂದ ಹಳೇನಗರದ ಕನಕಮಂಟಪದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ : ನಾಡಹಬ್ಬ ದಸರಾ ಅಂಗವಾಗಿ ನಗರಸಭೆಯಿಂದ ಹಳೇನಗರದ ಕನಕಮಂಟಪದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿರು.
    ಟಿ.ವಿ ವಾಹಿನಿಯ ಕಾಮಿಡಿ ಕಿಲಾಡಿಗಳು ಹಾಗು ಬೆಂಗಳೂರಿನ ಗಾಯಕರಿಂದ ನೃತ್ಯ/ಸಂಗೀತ/ ಕಾಮಿಡಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ೧೦ ದಿನಗಳ ನಾಡಹಬ್ಬ ದಸರಾ ಆಚರಣೆ ಯಶಸ್ವಿಗೊಳ್ಳಲು ಶ್ರಮಿಸುತ್ತಿರುವ ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನಗರಸಭೆ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು  ನಗರಸಭೆ ಎಲ್ಲಾ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.  
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸುನಂದಮ್ಮ ನಿಧನ

ಸುನಂದಮ್ಮ 
    ಭದ್ರಾವತಿ: ಹಳೇನಗರದ ಬ್ರಾಹ್ಮಣರ ಬೀದಿ ನಿವಾಸಿ ಸುನಂದಮ್ಮ (೮೫) ವಯೋ ಸಹಜವಾಗಿ ಸೋಮವಾರ ರಾತ್ರಿ ನಿಧನರಾದವರು. 
    ಮೃತರಿಗೆ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ರಮಾಕಾಂತ್(ಪುಟ್ಟಣ್ಣ) ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಸಂಸ್ಕಾರ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ನೆರವೇರಿತು.
ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಮತ್ತು ಸದಸ್ಯರು, ಧಾರ್ಮಿಕ ಮುಖಂಡ ನರಸಿಂಹಾಚಾರ್, ಸತೀಶ್ ಅಯ್ಯರ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ರಮೇಶ್ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಮೇದ ಜನಾಂಗದ ಕೌಲಶ್ಯ ಅಭಿವೃದ್ಧಿಗಾಗಿ ಕರಕುಶಲ ವಸ್ತುಗಳ ತರಬೇತಿ ಶಿಬಿರ : ಜಿ. ಪಲ್ಲವಿ

ಶಿವಮೊಗ್ಗ ಜಿಲ್ಲಾ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿಗಳ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಜಿಲ್ಲಾಧ್ಯಕ್ಷ  ರಾಜಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಮೇದ ಜನಾಂಗದವರ ಏಳಿಗೆಗೆ ಬದ್ಧವಾಗಿದ್ದು, ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಅನುಕೂಲವಾಗುವಂತೆ ಕೌಶಲ್ಯ ಅಭಿವೃದ್ಧಿಗಾಗಿ ಬಿದಿರು ಬುಟ್ಟಿ ತಯಾರಿಕೆ ಸೇರಿದಂತೆ ಕರಕುಶಲ ವಸ್ತುಗಳ ತರಬೇತಿ ಶಿಬಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿಗಳ ನಿಗಮದ ವತಿಯಿಂದ ಆಯೋಜಿಸಲಾಗುವುದು ಎಂದು ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹೇಳಿದರು. 
    ಅವರು ಶಿವಮೊಗ್ಗ ಜಿಲ್ಲಾ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮೇದ ಜನಾಂಗದವರು ಇಂದಿಗೂ ತಮ್ಮ ಮೂಲ ಕಸುಬು ಮುಂದುವರೆಸಿಕೊಂಡು ಬರುತ್ತಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಜನಾಂಗ ಹೆಚ್ಚು ಅಭಿವೃದ್ಧಿ ಹೊಂದಬೇಕಾಗಿದೆ ಎಂದರು. 
    ಶಿವಶರಣ ಮೇದಾರ ಕೇತೇಶ್ವರರ ಜಯಂತಿ ಸರ್ಕಾರದಿಂದ ಆಚರಿಸುವ ಮೂಲಕ ಆ ದಿನ ಸರ್ಕಾರಿ ರಜೆ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು. 
    ಹಿಂದುಳಿದ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜನಾಂಗದವರು ಸೂಕ್ತ ಮಾಹಿತಿ ನೀಡುವ ಮೂಲಕ ಧರ್ಮ-ಹಿಂದೂ, ಜಾತಿ-ಮೇದ(ಎಸ್.ಟಿ ಸಿ-೩೭.೧) ಎಂದು ಬರೆಸುವುದು ಅಥವಾ ಸಮಾನಾರ್ಥಕ ಪದಗಳಾದ ಮೇದಾರಿ(ಎಸ್.ಟಿ ಸಿ-೩೭.೨), ಗೌರಿಗ(ಎಸ್.ಟಿ ಸಿ-೩೭.೩), ಬುರುಡ(ಎಸ್.ಟಿ ಸಿ-೩೭.೪) ಮತ್ತು ಮೇದಾರ(ಎಸ್.ಟಿ ಸಿ-೩೭.೫) ಎಂದು ದಾಖಲಿಸುವಂತೆ ಸೂಚಿಸಲಾಯಿತು. 
    ಜಿಲ್ಲಾಧ್ಯಕ್ಷ ಆಯನೂರು ರಾಜಣ್ಣ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಬಿ. ಶಂಕರ್, ಖಜಾಂಚಿ ಮಲ್ಲೇಶ್, ಶಿವಮೊಗ್ಗ ಜಿಲ್ಲಾ ಮೇದಾರ ಅಲೆಮಾರಿ ಡಿಸಿ ಕಮಿಟಿ ಸದಸ್ಯ ಕೂಡ್ಲಿಗೆರೆ ಎಸ್. ಮಹಾದೇವ,  ಅಲೆಮಾರಿ ಸಂಘಟನೆಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಿ.ಎಸ್ ಆನಂದಕುಮಾರ್ ಏಕವಲ್ಯ, sಸೊರಬ ರವಿ, ಶಿಕಾರಿಪುರ ಲಕ್ಷ್ಮಣ್ಣಪ್ಪ, ವೀರಭದ್ರಪ್ಪ, ಬಾರಂದೂರು ಸೋಮಣ್ಣ, ಶಿವಮೊಗ್ಗ ಸೀಮೆಎಣ್ಣೆ ರಾಮಣ್ಣ, ಭದ್ರಾವತಿ ಎಚ್. ವಿಶ್ವನಾಥ್, ರಮೇಶ್, ಚಿಕ್ಕಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.