ಸೋಮವಾರ, ಅಕ್ಟೋಬರ್ 13, 2025

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾಗಿ ಆಯ್ಕೆ

ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಚುನಾವಣೆಯಲ್ಲಿ ಗೆಲುವು ಸಾಧಿಸಿ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಭದ್ರಾವತಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್  ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಅಭಿನಂದಿಸಿದ್ದಾರೆ. 
    ಭದ್ರಾವತಿ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃಧ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಹಾಗು ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್‌ರವರು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 
    ಪ್ರತಿ ೫ ವರ್ಷಕ್ಕೆ ನಡೆಯುವ ಚುನಾವಣೆಯಲ್ಲಿ ಈ ಬಾರಿ ಕ್ಷೇತ್ರದಿಂದ ಬಿ.ಕೆ ಶಿವಕುಮಾರ್ ಸ್ಪರ್ಧಿಸಿದ್ದರು. ಹಾಲಿ ನಿರ್ದೇಶಕರಾಗಿದ್ದ ನಗರದ ಸಂಜೀವಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 
    ಈ ಹಿಂದಿನ ಅವಧಿಯಲ್ಲಿ ಕ್ಷೇತ್ರದಿಂದ ಹಿರಿಯ ಸಹಕಾರ ಧುರೀಣರಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎಲ್ ಷಡಾಕ್ಷರಿ, ಜಯರಾಂ ಗೊಂದಿ, ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ದುಗ್ಗೇಶ್ ತೇಲ್ಕರ್ ಮತ್ತು ಯುವ ಮುಖಂಡ ಸಂಜೀವಕುಮಾರ್ ಸೇರಿದಂತೆ ಒಟ್ಟು ೪ ಜನರು ಆಯ್ಕೆಯಾಗಿದ್ದರು. ಈ ಪೈಕಿ ದುಗ್ಗೇಶ್ ತೇಲ್ಕರ್ ಮತ್ತು ಎಚ್.ಎಲ್ ಷಡಾಕ್ಷರಿಯವರು ಅಧ್ಯಕ್ಷರಾಗಿ ಹಾಗು ಸಂಜೀವಕುಮಾರ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 
    ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಈ ಬಾರಿ ಶಿವಮೊಗ್ಗ ಮತ್ತು ಸಾಗರ ಎರಡು ವಿಭಾಗಗಳನ್ನಾಗಿ ವಿಂಗಡಿಸಿ ಚುನಾವಣೆ ನಡೆಸಲಾಗಿತ್ತು. ಒಟ್ಟು ೧೫ ನಿರ್ದೇಶಕರ ಸ್ಥಾನಗಳನ್ನು ಒಳಗೊಂಡಿದೆ. 
    ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಿ.ಕೆ ಶಿವಕುಮಾರ್ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್  ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಅಭಿನಂದಿಸಿದ್ದಾರೆ. 
    ಬಿ.ಕೆ ಶಿವಕುಮಾರ್‌ರವರು ಈ ವರ್ಷ ಆರಂಭದಲ್ಲಿ ಜನವರಿ ತಿಂಗಳಿನಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಬೀಗರಾಗಿದ್ದು, ಹಂತ ಹಂತವಾಗಿ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 

ಭಾನುವಾರ, ಅಕ್ಟೋಬರ್ 12, 2025

ಶತಮಾನ ಪೂರೈಸಿರುವ ಶಿಥಿಲಗೊಂಡಿರುವ ತಮಿಳು ಶಾಲೆ ಕಟ್ಟಡ

ಸೋರುತ್ತಿದೆ ಮಳೆ ನೀರು, ಮೇಲ್ಭಾಗ ಕುಸಿದು ಬೀಳುವ ಆತಂಕ

ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ, ನ್ಯೂಟೌನ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿರುವ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ.
    * ಅನಂತಕುಮಾರ್ 
    ಭದ್ರಾವತಿ : ನಗರದ ಉಂಬ್ಳೆಬೈಲು ರಸ್ತೆ, ನ್ಯೂಟೌನ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿರುವ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಮಳೆ ನೀರು ಸೋರುತ್ತಿದೆ. ಕಟ್ಟಡದ ಮೇಲ್ಭಾಗ ಕುಸಿದು ಬೀಳುವ ಆತಂಕ ಎದುರಾಗಿದೆ. 
    1923ರಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಶತಮಾನ ಪೂರೈಸಿದ್ದು, ಸಂಪೂರ್ಣವಾಗಿ ಶಿಥಿಲಗೊಂಡಿದೆ. ಆರಂಭದಲ್ಲಿ 1946ರವರೆಗೆ ಈ ಕಟ್ಟಡವನ್ನು ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗಿತ್ತು. ನಂತರ ಸರ್ಕಾರಿ ತಮಿಳು ಶಾಲೆಯನ್ನಾಗಿ ಪರಿವರ್ತಿಸಲಾಯಿತು. ಸುಮಾರು 79 ವರ್ಷಗಳಿಂದ ಸರ್ಕಾರಿ ಶಾಲೆ ಅಸ್ತಿತ್ವದಲ್ಲಿದ್ದು, ಪ್ರಸ್ತುತ ಈ ಶಾಲೆ 1 ರಿಂದ 8ನೇ ತರಗತಿವರೆಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಿಂದ ಈ ಕಟ್ಟಡಕ್ಕೆ ಅಂಗನವಾಡಿ ಸಹ ಹಸ್ತಾಂತರಿಸಲಾಗಿದೆ. ತಮಿಳು ಮಾಧ್ಯಮ ಮತ್ತು ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. 
    ಶತಮಾನ ಪೂರೈಸಿರುವ ಈ ಕಟ್ಟಡ ಸಂರಕ್ಷಿಸಿಕೊಳ್ಳುವ ಅಗತ್ಯವಿದೆ. ಶಾಲೆಗೆ ಲಭ್ಯವಾಗುವ ಅಲ್ಪಸ್ವಲ್ಪ ಅನುದಾನದಲ್ಲಿ ಸಣ್ಣ ಪ್ರಮಾಣದ ದುರಸ್ತಿ ಕಾರ್ಯಗಳನ್ನು ಕೈಕೊಳ್ಳುವ ಮೂಲಕ ನಿರ್ವಹಣೆ ಮಾಡಿಕೊಂಡು ಹೋಗಲಾಗುತ್ತಿದೆ. ಕಟ್ಟಡದ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಅನುದಾನ ಲಭ್ಯವಿದೆ. ಆದರೆ ಅನುದಾನ ನೀಡಲು ಯಾರು ಸಹ ಮುಂದೆ ಬರುತ್ತಿಲ್ಲ. ಅದರಲ್ಲೂ ತಮಿಳು ಶಾಲೆಯಾಗಿರುವುದರಿಂದ ನಿರ್ಲಕ್ಷö್ಯ ಹೆಚ್ಚಾಗಿದೆ. 


    ಕಳೆದ ಸುಮಾರು 15-20 ವರ್ಷಗಳ ಹಿಂದೆ ಕಟ್ಟಡ ಮೇಲ್ಭಾಗ ದುರಸ್ತಿ ಮಾಡಲಾಗಿದ್ದು, ಆದರೆ ಸರಿಯಾಗಿ ದುರಸ್ತಿ ಕೈಗೊಳ್ಳದ ಕಾರಣ ಪುನಃ ಶಿಥಿಲಗೊಂಡು ಮಳೆ ನೀರು ಸೋರುತ್ತಿದೆ. ಕಟ್ಟಡ ದುರಸ್ತಿಗೊಳಿಸುವಂತೆ ಹಲವಾರು ಬಾರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇಲಾಖೆಯಲ್ಲಿ ಕಟ್ಟಡ ದುರಸ್ತಿಗೊಳಿಸುವಂತೆ ಅನುದಾನ ಲಭ್ಯವಿಲ್ಲವೆಂದು ಕೈಚೆಲ್ಲಿ ಕುಳಿತುಕೊಳ್ಳಲಾಗಿದೆ. 
     ಒಂದು ಕಡೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿದರೆ ಮಾತ್ರ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ಮತ್ತೊಂದು ಕಡೆ ಶಾಲಾ ಕಟ್ಟಡ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪೋಷಕರು ಮುಂದೆ ಬರುತ್ತಿಲ್ಲ. ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರು ಸಹ ಬಡವರಾಗಿದ್ದು, ಆರ್ಥಿಕ ನೆರವು ನಿರೀಕ್ಷಿಸುವುದು ಸಹ ಕಷ್ಟವಾಗಿದೆ. ಇದರಿಂದಾಗಿ ಶಿಕ್ಷಕರು ಸಹ ಅತಂತ್ರ ಸ್ಥಿತಿಯಲ್ಲಿದ್ದಾರೆ. 
     ಶಾಲಾಭಿವೃದ್ಧಿ ಸಮಿತಿ ರಚನೆಯಾಗಿಲ್ಲ : 
      ಶಾಲೆ ಕಟ್ಟಡ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಅಗತ್ಯವಾಗಿದೆ. ಆದರೆ ಸಮಿತಿ ರಚನೆ ಅಗತ್ಯವಿರುವಷ್ಟು ವಿದ್ಯಾರ್ಥಿಗಳನ್ನು ಈ ಶಾಲೆ ಹೊಂದಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಪ್ರಸ್ತುತ ಶಾಲೆಯಲ್ಲಿ 7 ಜನ ವಿದ್ಯಾರ್ಥಿಗಳು ಮಾತ್ರ ಇದ್ದು, ಉಳಿದಂತೆ ಅಂಗನವಾಡಿಯಲ್ಲಿ ಸುಮಾರು 15 ರಿಂದ 20 ಮಕ್ಕಳಿದ್ದಾರೆ. 
 ಶಾಲಾಭಿವೃದ್ಧಿ ಸಮಿತಿ ರಚನೆಯಾದಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ದಾನಿಗಳು ಸಹ ನೆರವಿಗೆ ಧಾವಿಸಲಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಭವಿಷ್ಯದಲ್ಲಿ ಈ ಶಾಲೆಯಿಂದ ಇನ್ನೂ ಹಲವಾರು ವರ್ಷಗಳ ವರೆಗೆ ಸೇವೆ ಲಭ್ಯವಾಗಲಿದೆ. ಈ ಹಿನ್ನಲೆಯಲ್ಲಿ ಈ ಶಾಲೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. 
 ಇಲಾಖೆಯಲ್ಲಿ ಯಾವುದೇ ಅನುದಾನವಿಲ್ಲ. ಈ ಹಿನ್ನಲೆಯಲ್ಲಿ ಶಾಲೆ ಕಟ್ಟಡ ದುರಸ್ತಿಗೊಳಿಸುವಂತೆ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಉಳಿದಂತೆ ಸಣ್ಣ ಪ್ರಮಾಣದ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶಾಲೆ ಕಟ್ಟಡ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಶಾಲೆಯಲ್ಲಿ ಕೈಗೊಳ್ಳಬೇಕಾಗಿರುವ ಇನ್ನಿತರ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. 
 - ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ. 


ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ, ನ್ಯೂಟೌನ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿರುವ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡು ಮಳೆ ನೀರು ಸೋರುತ್ತಿರುವುದು.

ಶನಿವಾರ, ಅಕ್ಟೋಬರ್ 11, 2025

ಭಾರಿ ಗಾತ್ರದ ಮಳೆಯಿಂದ ಭತ್ತದ ಬೆಳೆಗೆ ಹಾನಿ

ಭದ್ರಾವತಿಯಲ್ಲಿ ಪ್ರಗತಿಪರ ರೈತ ಭಂಡಾರಹಳ್ಳಿ ಶ್ರೀಧರ್‌ರವರು ಬೆಳೆದಿರುವ ಭತ್ತದ ಬೆಳೆ ಭಾರಿ ಗಾತ್ರದ ಮಳೆಯಿಂದಾಗಿ ಹಾನಿಗೊಳಗಾಗಿದೆ.  
    ಭದ್ರಾವತಿ : ಕಳೆದ ೨ ದಿನಗಳ ಹಿಂದೆ ಸುರಿದ ಭಾರಿ ಗಾತ್ರದ ಮಳೆಯಿಂದಾಗಿ ಕ್ಷೇತ್ರದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದ್ದು,  ಪ್ರಗತಿಪರ ರೈತ ಭಂಡಾರಹಳ್ಳಿ ಶ್ರೀಧರ್ ಆತಂಕ ವ್ಯಕ್ತಪಡಿಸಿದ್ದಾರೆ. 
    ಕ್ಷೇತ್ರದ ಬಹುತೇಕ ವ್ಯಾಪ್ತಿಯಲ್ಲಿ ರೈತರು ಭತ್ತದ ಬೆಳೆದಿದ್ದು, ಭಾರಿ ಗಾತ್ರದ ಮಳೆಯಿಂದಾಗಿ ಹೂವಿನ ಹಂತದಲ್ಲಿರುವ ಭತ್ತದ ಬೆಳೆಗೆ ಹಾನಿಯಾಗಿದೆ. ಮುಂದಿನ ಒಂದೆಡೆರಡು ತಿಂಗಳಲ್ಲಿ ಬೀಜ ಕಟ್ಟುವ ಹಂತಕ್ಕೆ ಬೆಳೆ ತಲುಪಲಿದೆ. ಈ ಹಂತದಲ್ಲಿ ಬೀಜ ಸರಿಯಾಗಿ ಬೆಳವಣಿಗೆಯಾಗದೆ ಇಳುವಳಿ ಕುಸಿತವಾಗಲಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಶ್ರೀಧರ್ ಆತಂಕ ವ್ಯಕ್ತಪಡಿಸಿದ್ದಾರೆ. 
    ನಾಟಿ ವಿಳಂಬವಾಗಿ ನಡೆದಿರುವ ಬೆಳೆಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಸಂಕಷ್ಟಕ್ಕೆ ಒಳಗಾಗುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕೆಂದು ಕೋರಿದ್ದಾರೆ.

ಶ್ರೀ ಬೀರೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ೨ನೇ ವರ್ಷದ ವಾರ್ಷಿಕೋತ್ಸವ

ಭದ್ರಾವತಿ ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದ ಸಮೀಪದಲ್ಲಿರುವ ಶ್ರೀ ಬೀರೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ೨ನೇ ವರ್ಷದ ವಾರ್ಷಿಕೋತ್ಸವ ಯಶಸ್ವಿಯಾಗಿ ನಡೆಯಿತು. 
    ಭದ್ರಾವತಿ : ನಗರದ ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದ ಸಮೀಪದಲ್ಲಿರುವ ಶ್ರೀ ಬೀರೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ೨ನೇ ವರ್ಷದ ವಾರ್ಷಿಕೋತ್ಸವ ಯಶಸ್ವಿಯಾಗಿ ನಡೆಯಿತು. 
    ಕಳೆದ ೨ ವರ್ಷದಿಂದ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೊಸೈಟಿ ಮುಖ್ಯ ಶಾಖೆ ಬೆಳಗಾವಿ, ಚಿಕ್ಕೋಡಿ ಯಕ್ಸಾಂಬದಲ್ಲಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಒಟ್ಟು ೨೨೮ಕ್ಕೂ ಹೆಚ್ಚು ಶಾಖೆಗಳನ್ನು ಒಳಗೊಂಡಿದೆ. ಹಲವು ವಿಭಿನ್ನ ಸೇವೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. 
  ಸೊಸೈಟಿ ಉಪಾಧ್ಯಕ್ಷ ಎಸ್. ರಾಜಶೇಖರ ಉಪ್ಪಾರ, ನಿರ್ದೇಶಕರಾದ ಬಸವಂತಪ್ಪ ಹಾಗೂ ಹರೀಶ್‌ಕುಮಾರ್, ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ : ಶಿವಬಸಪ್ಪರಿಗೆ ಸನ್ಮಾನ

ಭದ್ರಾವತಿ ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಶಿವಬಸಪ್ಪರವರ ವಿಕಲಚೇತನರ ಸೇವೆಯನ್ನು ಗುರುತಿಸಿ ಶಿವಮೊಗ್ಗ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರದ ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಶಿವಬಸಪ್ಪರವರ ವಿಕಲಚೇತನರ ಸೇವೆಯನ್ನು ಗುರುತಿಸಿ ಶಿವಮೊಗ್ಗ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಶಿವಬಸಪ್ಪರವರು ಕಳೆದ ಹಲವು ದಶಕಗಳಿಂದ ವಿಕಲಚೇತನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅಲ್ಲದೆ ದಲಿತ ಸಂಘಟನೆಗಳ ನೇತೃತ್ವವಹಿಸಿ ಹಲವಾರು ಹೋರಾಟಗಳನ್ನು ಮುನ್ನಡೆಸಿದ್ದಾರೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಕೊಡುಗೆ ನೀಡಿದ್ದು, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. 
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್ ಚಂದ್ರ ಭೂಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪನಿರ್ದೇಶಕಿ ಸುವರ್ಣ ವಿ. ನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಗಾಯನ ಸ್ಪರ್ಧೆಯಲ್ಲಿ ಜಂಬೂಸ್ವಾಮಿಗೆ ಪ್ರಥಮ ಬಹುಮಾನ

ಜಂಬೂಸ್ವಾಮಿ 
    ಭದ್ರಾವತಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗು ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಹಿರಿಯ ನಾಗರಿಕ ಜಂಬೂಸ್ವಾಮಿ ಸಾಂಸ್ಕೃತಿಕ ಸ್ಪರ್ಧೆಯ ಗಾಯನ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. 
    ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ, ಜಂಜೂಸ್ವಾಮಿಯವರು ದೇಶಭಕ್ತಿ ಗೀತೆ, ಭಾವಗೀತೆ ಮತ್ತು ಜಾನಪದ ಗೀತೆ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಗಾಯಕರಾಗಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡು ಕೀರ್ತಿ ತಂದಿದ್ದಾರೆ. ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿನೀಡಿ ಗೌರವಿಸಲಾಗಿದೆ. 

ಶುಕ್ರವಾರ, ಅಕ್ಟೋಬರ್ 10, 2025

ಅ.೧೨ರಂದು ವಿದ್ಯುತ್ ವ್ಯತ್ಯಯ

 

  
ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗದ ಬಿ.ಎಚ್ ರಸ್ತೆಯಲ್ಲಿ ಹೊಸದಾಗಿ ೧೧ ಕೆ.ವಿ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೆಸ್ಕಾಂ ಘಟಕ-೫ರ ಶಾಖಾ ವ್ಯಾಪ್ತಿಯಲ್ಲಿ ಅ.೧೨ರ ಭಾನುವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಶಿವರಾಮನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ, ಜೇಡಿಕಟ್ಟೆ ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲೀಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾ.