Friday, May 29, 2020

೧೦೦ ಮೀಟರ್ ಅಂತರದ ಒಳಗಿರುವ ಮದ್ಯದಂಗಡಿಗಳ ಪರವಾನಗಿ ರದ್ದುಗೊಳಿಸಿ

ಮುಖ್ಯಮಂತ್ರಿಗಳಿಗೆ ಸಂಯುಕ್ತ ಜನತಾದಳ ವತಿಯಿಂದ ತಹಸೀಲ್ದಾರ್ ಮೂಲಕ ಮನವಿ 

ಕರ್ನಾಟಕ ಅಬಕಾರಿ ಅಧಿನಿಯಮ ಉಲ್ಲಂಘಿಸಿ ಅಕ್ರಮವಾಗಿ ೧೦೦ ಮೀಟರ್ ಅಂತರದ ಒಳಗಿರುವ ಮದ್ಯದಂಗಡಿಗಳ ವಿರುದ್ದ ಸ್ವತಃ ದೂರು ದಾಖಲಿಸಿಕೊಂಡು ಪರವಾನಿಗೆ ನವೀಕರಣಗೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಭದ್ರಾವತಿಯಲ್ಲಿ ಮುಖ್ಯಮಂತ್ರಿಗಳಿಗೆ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೨೯: ಶಾಲಾ-ಕಾಲೇಜು, ಆಸ್ಪತ್ರೆ, ಧಾರ್ಮಿಕ ಸ್ಥಳಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವ ಸ್ಥಳಗಳಲ್ಲಿ ಕರ್ನಾಟಕ ಅಬಕಾರಿ ಅಧಿನಿಯಮ ಉಲ್ಲಂಘಿಸಿ ಅಕ್ರಮವಾಗಿ ೧೦೦ ಮೀಟರ್ ಅಂತರದ ಒಳಗಿರುವ ಮದ್ಯದಂಗಡಿಗಳ ವಿರುದ್ದ ಸ್ವತಃ ದೂರು ದಾಖಲಿಸಿಕೊಂಡು ಪರವಾನಿಗೆ ನವೀಕರಣಗೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿಗಳಿಗೆ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ದೇಶದಲ್ಲಿ ಮದ್ಯಪಾನ ನಿರ್ಮೂಲನೆ ಬಯಸಿ ರಾಮರಾಜ್ಯದ ಕನಸು ಕಂಡಿದ್ದರು. ಆದರೆ ಅವರ ಕನಸು ಇಂದಿಗೂ ನನಸಾಗಿಲ್ಲ. ಮಹಾತ್ಮಗಾಂಧಿಯವರ ಚಿಂತನೆಗಳನ್ನು ಗಾಳಿಗೆ ತೂರಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಮದ್ಯ ವ್ಯಸನಿಗಳು ಹಣ, ಆರೋಗ್ಯ ಮತ್ತು ಮಾನ ಕಳೆದುಕೊಳ್ಳುವಂತಾಗಿದೆ. ಅಲ್ಲದೆ ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ಅಳಲು ವ್ಯಕ್ತಪಡಿಸಲಾಗಿದೆ.
ದೇಶದಲ್ಲಿ ಈಗಾಗಲೇ ಗುಜರಾತ್, ಬಿಹಾರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ರಾಜ್ಯದಲ್ಲೂ ಸಹ ದಿಟ್ಟ ನಿರ್ಧಾರ ಕೈಗೊಂಡು ಮದ್ಯಪಾನ ನಿಷೇಧ ಜಾರಿಗೆ ತರಲು ಮುಂದಾಗಬೇಕು. ಪ್ರಸ್ತುತ ಹೊಸದಾಗಿ ಸುಮಾರು ೧ ಸಾವಿರಕ್ಕೂ ಹೆಚ್ಚು ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡಲು ಮುಂದಾಗಿರುವ ವಿಚಾರ ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ಮನವಿ ಮಾಡಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ೧೧,೦೩೭ ಮದ್ಯದಂಗಡಿಗಳಿದ್ದು, ಬಹುತೇಕ ಮದ್ಯದಂಗಡಿಗಳು ಶಿಕ್ಷಣ ಸಂಸ್ಥೆ, ಕಾಲೇಜು, ವಿಶ್ವವಿದ್ಯಾನಿಲಯ, ಪೂರ್ವ ಪ್ರಾಥಮಿಕ ಶಾಲೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಛೇರಿಗಳು, ಎ ಮತ್ತು ಬಿ ದರ್ಜೆ ಹೊಂದಿರುವ ಕಛೇರಿ ಮತ್ತು ಸಿಟಿ ಕಾರ್ಪೋರೇಷನ್, ಸಿಟಿ ಮುನಿಸಿಪಾಲಿಟಿ ಕಾರ್ಪೋರೇಷನ್, ಟೌನ್ ಮುನ್ಸಿಪಲ್ ಕಾರ್ಪೋರೇಷನ್, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ಧಾರ್ಮಿಕ ಸಂಸ್ಥೆಗಳು ಎಂದರೆ ದೇವಸ್ಥಾನ, ಮಠ, ಮಸೀದಿ, ಚರ್ಚ್, ಸಾರ್ವಜನಿಕ ಧಾರ್ಮಿಕ ಮತ್ತು ಧರ್ಮಾರ್ಥ ದತ್ತಿ, ಅಂಗನವಾಡಿ, ೩೦ ಹಾಸಿಗೆಯುಳ್ಳ ನರ್ಸಿಂಗ್ ಹೋಂ ಸೇರಿದಂತೆ ಇನ್ನಿತರ ಸ್ಥಳಗಳ ೧೦೦ ಮೀಟರ್ ಅಂತರದ ಒಳಗಿವೆ. ಅಲ್ಲದೆ ಕೆಲವು ಮದ್ಯದಂಗಡಿಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮದ್ಯದಿಂದ ೨೨೦ ಮೀಟರ್ ಅಂತರದ ಒಳಗಿವೆ. ಮುಖ್ಯಮಂತ್ರಿಗಳು ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಅಬಕಾರಿ ಉಪ ಆಯುಕ್ತರಿಗೆ ಸ್ವತಃ ದೂರು ದಾಖಲಿಸಿಕೊಂಡು  ಈ ಮದ್ಯದಂಗಡಿಗಳ ಪರವಾನಗಿ ನವೀಕರಣಗೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್‌ರವರ ನೇತೃತ್ವದಲ್ಲಿ ರಾಜ್ಯಾದ್ಯಂತ ಶಾಂತಿಯುತವಾಗಿ ಹಾಗೂ ಲಾಕ್‌ಡೌನ್ ಮುಗಿದ ನಂತರ ನಿರಂತರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಸಲಾಗಿದೆ.
ಪಕ್ಷದ ಮುಖಂಡರಾದ ಬಾಬು ದೀಪಕ್ ಕುಮಾರ್, ಹರೀಶ್‌ಗೌಡ, ಮನೋಜ್, ರವಿಚಂದ್ರ, ರೈತ ಮುಖಂಡ ಸುಬ್ಬೇಗೌಡ, ದಲಿತ ಮುಖಂಡ ರವಿಕುಮಾರ್ ನಾಯ್ಕ, ಕರವೇ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment