೨೦ ಕೋ. ರು. ದುರುಪಯೋಗಪಡಿಸಿಕೊಳ್ಳದಿರಲು ಆಡಳಿತ ಮಂಡಳಿಗೆ ಸೂಚನೆ
ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣ ೨೦ ಕೋ. ರು ಬಿಡುಗಡೆಗೊಳಿಸಿ ಆದೇಶಿಸಿರುವುದು.
ಭದ್ರಾವತಿ, ಮೇ. ೨೦: ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣ ಕೊನೆಗೂ ಸರ್ಕಾರ ಮಂಜೂರಾತಿ ಮಾಡಿದ್ದು, ಇದೀಗ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.
ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಪತ್ರ ಬರೆದಿದ್ದು, ತಕ್ಷಣ ೨೦ ಕೋ. ರು. ಬಿಡುಗಡೆಗೊಳಿಸಲಾಗುತ್ತಿದೆ. ಈ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳದೆ ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ಹೊಂದಿರುವ ಕಾರ್ಮಿಕರಿಗೆ ನೀಡಬೇಕೆಂದು ಹಾಗು ಯೋಜನೆಯ ಲೆಕ್ಕ ಪರಿಶೋಧನಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಹಿಂದೆ ಕಾರ್ಖಾನೆಯನ್ನು ಖಾಸಗಿಕರಣಗೊಳಿಸುವ ಸಂಬಂಧ ಮಾನವ ಸಂಪನ್ಮೂಲ ಶೂನ್ಯಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯಂ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್) ಮತ್ತು ಗುತ್ತಿಗೆ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸ್ವಯಂ ಪ್ರತ್ಯೇಕೀಕರಣ ಯೋಜನೆ(ವಿಎಸ್‌ಎಸ್) ಜಾರಿಗೊಳಿಸಿತ್ತು. ಶೇ.೯೦ರಷ್ಟು ಕಾರ್ಮಿಕರು ಈ ಯೋಜನೆಯಡಿ ನಿವೃತ್ತಿ ಪಡೆದುಕೊಂಡಿದ್ದರು. ಸರ್ಕಾರ ಎರಡು ಕಂತುಗಳಲ್ಲಿ ಈ ಯೋಜನೆಗೆ ಹಣ ಬಿಡುಗಡೆಗೊಳಿಸಿತ್ತು. ಆದರೆ ಆಡಳಿತ ಮಂಡಳಿ ಲೆಕ್ಕ ಪರಿಶೋಧನಾ ವರದಿ ಪೂರ್ಣಗೊಳಿಸದ ಕಾರಣ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣದಲ್ಲಿ ಕಡಿತ ಮಾಡಿತ್ತು. ಈ ಹಿನ್ನಲೆಯಲ್ಲಿ ಕಾರ್ಮಿಕರು ಕೊನೆ ಹಂತದಲ್ಲಿ ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ೨೦ ಕೋ. ರು. ಬಿಡುಗಡೆಗೊಳಿಸಿದೆ. ಇದರಿಂದಾಗಿ ಕಾರ್ಮಿಕರು ಪ್ರಸ್ತುತ ಎದುರಾಗಿರುವ ಸಂಕಷ್ಟದಿಂದ ಪಾರಾಗುವಂತಾಗಿದೆ.
No comments:
Post a Comment