ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಮೂಕ ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಿ ಗೋ ಶಾಲೆಗಳಿಗೆ ಮೇವು ಕಳುಹಿಸಿ ಕೊಡುತ್ತಿರುವುದು.
ಭದ್ರಾವತಿ, ಮೇ. ೨೦: ಒಂದೆಡೆ ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ಶ್ರೀಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಸಂಕಷ್ಟಗಳಿಗೆ ಬಲಿಯಾಗುತ್ತಿದೆ. ಈ ನಡುವೆ ಸ್ವಯಂ ಸೇವಾ ಸಂಸ್ಥೆಗಳು, ಜನ ಪ್ರತಿನಿಧಿಗಳು, ಉಳ್ಳವರು, ದಾನಿಗಳು ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗುತ್ತಿದ್ದಾರೆ. ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಒಬ್ಬರಾಗಿದ್ದು, ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಬಂದ ನಂತರ ರೈತರು, ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು ಸೇರಿದಂತೆ ಎಲ್ಲಾ ವರ್ಗದ ಶ್ರೀಸಾಮಾನ್ಯರ ನೆರವಿಗೆ ಮುಂದಾಗಿದ್ದಾರೆ. ಇದೀಗ ಮೂಕ ಪ್ರಾಣಿಗಳ ಹಸಿವನ್ನೂ ಸಹ ನೀಗಿಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ.
ರೈತರ ಹಿತರಕ್ಷಣೆಗಾಗಿ ರೈತರು ಬೆಳೆದ ತರಕಾರಿಯನ್ನು ಖರೀದಿಸಿ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರತಿ ಮನೆ ಮನೆಗೆ ಹಂಚುವಲ್ಲಿ ಯಶಸ್ವಿಯಾಗಿದ್ದರು. ನಂತರ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರನ್ನು ಗುರುತಿಸಿ ಬೆಲ್ಲದ ಗಾಣ ಹೊಂದಿರುವ ರೈತರ ಸಹಕಾರ ಸಂಘದ ಸಹಕಾರದೊಂದಿಗೆ ಸಾವಿರಾರು ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದ್ದರು.
ಇದೀಗ ಶಿವಮೊಗ್ಗ, ಅರಸೀಕೆರೆ ಮತ್ತು ಬಾಣವಾರ ಗೋ ಶಾಲೆಗಳಿಗೆ ಕಳೆದ ೭ ದಿನಗಳಿಂದ ನಿರಂತರವಾಗಿ ಮೇವು ವಿತರಣೆ ಮಾಡುತ್ತಿದ್ದು, ಮುಂದಿನ ೭ ದಿನಗಳ ವರೆಗೆ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಸಹೋದರರಾದ ಬಿ.ಕೆ ಜಗನ್ನಾಥ, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್ ಹಾಗೂ ಸ್ಥಳೀಯ ಮುಖಂಡರು ಸಹ ಕೈ ಜೋಡಿಸಿದ್ದಾರೆ.
No comments:
Post a Comment