ತಹಸೀಲ್ದಾರ್ ವಿರುದ್ಧ ಡಿಎಸ್‌ಎಸ್ ಪ್ರತಿಭಟನೆ
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ, ಅಗರದಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ವತಿಯಿಂದ ಕೈಗೊಂಡಿರುವ ಕೆರೆಗಳ ಅಳತೆ ಕಾರ್ಯ ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಗರದಹಳ್ಳಿ ಕ್ಯಾಂಪ್ ಕೆರೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಜೂ. ೨೬: ತಾಲೂಕಿನ ಹೊಳೆಹೊನ್ನೂರು ಹೋಬಳಿ, ಅಗರದಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ವತಿಯಿಂದ ಕೈಗೊಂಡಿರುವ ಕೆರೆಗಳ ಅಳತೆ ಕಾರ್ಯ ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಗರದಹಳ್ಳಿ ಕ್ಯಾಂಪ್ ಕೆರೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಗ್ರಾಮದಲ್ಲಿ ಸರ್ವೆ ನಂ.೩, ೪೯/ಬಿ, ೫೨, ೫೩, ೫೪, ೫೫, ೫೬, ೬೪, ೬೫ ಮತ್ತು ೭೨ರಲ್ಲಿ ಒಟ್ಟು ೯೮ ಎಕರೆ ವಿಸ್ತೀರ್ಣದಲ್ಲಿ ೩ ಕೆರೆಗಳಿದ್ದು, ಈ ಪೈಕಿ ಪರಿಶಿಷ್ಟ ಜಾತಿ, ಪಂಗಡದ ಬಡ ಕುಟುಂಬಗಳು ವಾಸಿಸುತ್ತಿರುವ ಸರ್ವೆ ನಂ. ೪೯/ಬಿ, ೫೨/೨, ೫೫, ೫೬/ಎ ಮತ್ತು ೬೯ರ ವ್ಯಾಪ್ತಿಯ ಕೆರೆಗಳನ್ನು ಮಾತ್ರ ಅಳತೆ ಮಾಡಲಾಗುತ್ತಿದೆ. ಹಣವಂತರಿಗೆ, ಬಲಾಢ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಲು ತಾಲೂಕು ಆಡಳಿತ ಅಳತೆ ಕಾರ್ಯ ಕೈಗೊಳ್ಳುತ್ತಿದೆ ಎಂದು ಆರೋಪಿಸಲಾಯಿತು.
ತಹಸೀಲ್ದಾರ್‌ರವರು ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಅಳತೆ ಕಾರ್ಯ ಕೈಗೊಳ್ಳುತ್ತಿರುವುದಾಗಿ ದಲಿತ ಸಂಘರ್ಷ ಸಮಿತಿಗೆ ತಿಳಿಸಿದ್ದು, ಆದರೆ ಜಿಲ್ಲಾಧಿಕಾರಿಗಳು ಯಾವುದೇ ಕೆಲಸ ಕೈಗೊಳ್ಳುವಾಗ ಲಿಖಿತ ಆದೇಶ ನೀಡುತ್ತಾರೆ. ಇದನ್ನು ಗಮನಿಸಿದಾಗ ತಹಸೀಲ್ದಾರ್‌ರವರು ಯಾವುದೋ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಗಳ ಹೆಸರಿಗೆ ಮಸಿ ಬಳಿಯಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಳತೆ ಕಾರ್ಯ ಕೈಗೊಳ್ಳುವುದಾದರೆ ಒಟ್ಟು ೯೮ ಎಕರೆ ಕೆರೆ ಅಳತೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಯಿತು.
ತಾಲೂಕು ಸಂಚಾಲಕ ವಿ. ವಿನೋದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಏಳುಕೋಟಿ, ಏಳುಮಲೈ, ಸುವರ್ಣಮ್ಮ, ತಾಲೂಕು ಸಂಘಟನಾ ಸಂಚಾಲಕರಾದ ವಸಂತಕುಮಾರ್, ಬಾಷ, ರವಿನಾಯ್ಕ, ಗುಣಶೇಖರ್, ಸುಧಾ, ಮಂಜಪ್ಪ, ಸೀನಾ, ಬಾಲು, ಮಲ್ಲೇಶ್, ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment