ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ, ಮನವಿ
ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಅಕ್ರಮವಾಗಿ ಸರ್ಕಾರಿ ಉದ್ಯೋಗ ಪಡೆದು ಸರ್ಕಾರಕ್ಕೆ ವಂಚಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭದ್ರಾವತಿ ತಾಲೂಕಿನ ಶಂಕರಘಟ್ಟದ ಕುವೆಂಪು ವಿಶ್ವ ವಿದ್ಯಾಲಯದ ಮುಂಭಾಗ ಶುಕ್ರವಾರ ಜೈಭೀಮ್ ಕನ್ನಡ ಜಾಗೃತಿ ವೇದಿಕೆ ಮತ್ತು ಎಸ್‌ಸಿ/ಎಸ್‌ಟಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಜೂ. ೨೬: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಅಕ್ರಮವಾಗಿ ಸರ್ಕಾರಿ ಉದ್ಯೋಗ ಪಡೆದು ಸರ್ಕಾರಕ್ಕೆ ವಂಚಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ಶಂಕರಘಟ್ಟದ ಕುವೆಂಪು ವಿಶ್ವ ವಿದ್ಯಾಲಯದ ಮುಂಭಾಗ ಶುಕ್ರವಾರ ಜೈಭೀಮ್ ಕನ್ನಡ ಜಾಗೃತಿ ವೇದಿಕೆ ಮತ್ತು ಎಸ್‌ಸಿ/ಎಸ್‌ಟಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಕುಲಪತಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಕುಲ ಸಚಿವರಾಗಿರುವ ಡಿ.ಎ ಗಾಯತ್ರಿ ಹಾಗೂ ಎಂ. ಸೀತಾರಾಮ ಹಾಗೂ ರಾಜ್ಯಶಾಸ್ತ್ರದ ವಿಭಾಗದ ಎ. ಷಣ್ಮುಗಂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದು ಇದೀಗ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಲಯ ಆದೇಶದಿಂದ ಛೀಮಾರಿ ಹಾಕಿದಂತಾಗಿದೆ. ಆದರೆ ಇಂದಿನ ಕುಲಪತಿಗಳಾಗಿರುವ ಪ್ರೊ. ಬಿ.ಪಿ ವೀರಭದ್ರಪ್ಪ ತಪ್ಪಿತಸ್ಥರ ವಿರುದ್ಧ ಅಮಾನತ್ತು ಅಥವಾ ಕಾನೂನು ರೀತಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆಂದು ಆರೋಪಿಸಲಾಯಿತು.
ಈ ಹಿಂದೆ ವಿಶ್ವ ವಿದ್ಯಾಲಯದಲ್ಲಿ ಪರೀಕ್ಷಾಂಗ ಕುಲಸಚಿವರಾಗಿದ್ದ ಪ್ರೊ. ಬೋಜನಾಯ್ಕರವರು ೧.೨೭ ಕೋ. ರು. ನೇರವಾಗಿ ಲಪಟಾಯಿಸಿದ್ದು, ಈ ಸಂಬಂಧ ಅಗತ್ಯ ದಾಖಲೆಯೊಂದಿಗೆ ಪ್ರಶ್ನಿಸಿ ದೂರು ಸಲ್ಲಿಸಿದ್ದರೂ ಸಹ ಪರಿಶೀಲಿಸದೆ, ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಜೊತೆಗೆ ನ್ಯಾಯಾಲಯದಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ ಎಸ್.ಎಸ್ ಮಂಜುನಾಥ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಗೌರವಾಧ್ಯಕ್ಷ ತಿಮ್ಲಾಪುರ ಲೋಕೇಶ್, ರಾಜ್ಯ ಉಪಾಧ್ಯಕ್ಷ ಎನ್.ಪಿ ವೆಂಕಟೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಕೆ ಹನುಮಂತಪ್ಪ ಮಂಗೋಟೆ ಮತ್ತು ಸಂಘಟನಾ ಕಾರ್ಯದರ್ಶಿ ಈ. ರಮೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment