Friday, July 17, 2020

ಜಿ+3 ಗುಂಪು ಮನೆ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಳಿಸಲು ಆಗ್ರಹಿಸಿ ಮನವಿ

ಕೋವಿಡ್-19 ನಿಯಂತ್ರಣದ ನಂತರ ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡಿ 

ಭದ್ರಾವತಿ, ಜು. 17: ನಗರಸಭೆ ವತಿಯಿಂದ  ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಧಾನ ಮಂತ್ರಿ ಆವಾಜ್ ಯೋಜನೆ ಎ.ಎಚ್.ಪಿ ಘಟಕದಡಿ ಸುಮಾರು ೪೦೦೦ ಜಿ+3 ಗುಂಪು ಮನೆ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಸ್ತುತ ಕೋವಿಡ್-೧೯  ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ನಗರದ ಮಾನವ ಹಕ್ಕುಗಳ ಹೋರಾಟ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. 
ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡವರಿಗೆ ಸುಮಾರು 20 ವರ್ಷಗಳ ನಂತರ ಮನೆಗಳನ್ನು ವಿತರಣೆ ಮಾಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈಗಾಗಲೇ ಆನ್‌ಲೈನ್ ಮುಖಾಂತರ ಒಟ್ಟು 5,372 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು,  4996 ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ 15 ದಿನಗಳೊಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಪತ್ರಿಕಾ ಪ್ರಕಟಣೆ ಸಹ ಹೊರಡಿಸಲಾಗಿದೆ. 
ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಗರಸಭೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಸಕಾಲದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಅಗತ್ಯ ದಾಖಲೆ ಪತ್ರಗಳನ್ನು ಕ್ರೋಢೀಕರಿಸಿಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ ಹಾಗು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ಸರಿಯಾದ ಮಾಹಿತಿ ಇಲ್ಲದ ಕಾರಣ ನಿಜವಾದ ಬಡವರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ನಡುವೆ ಕೋವಿಡ್-19 ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಕೋವಿಡ್-೧೯ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ನಂತರ ಪುನಃ ಅರ್ಜಿ ಸಲ್ಲಿಸಲು 2 ತಿಂಗಳು ಕಾಲಾವಕಾಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
ಒಂದು ವೇಳೆ ಪ್ರಕ್ರಿಯೆ ಸ್ಥಗಿತಗೊಳಿಸದೆ ಏಕಾಏಕಿ ಮನೆಗಳ ಹಂಚಿಕೆಗೆ ಮುಂದಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. 
ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ, ಕಾರ್ಯದರ್ಶಿ ಆರ್. ಬಸವರಾಜ್, ಸಂಚಾಲಕರಾದ ಗಾಯಕ್‌ವಾಡ್, ರೈತ ಮುಖಂಡ ಸುಬ್ಬೇಗೌಡ, ಆನಂದಮೂರ್ತಿ, ಮೇಘರಾಜ್, ಗವಿಸಿದ್ದಯ್ಯ, ರವಿನಾಯ್ಕ್, ವರಲಕ್ಷ್ಮಿ, ರಂಗನಾಥ್, ರಾಮಲಿಂಗಯ್ಯ, ಶ್ರೀದೇವಿ, ಶಿವನಾಯ್ಕ, ಬಾಷ, ಮಂಜುಳ, ದೊಡ್ಡಯ್ಯ, ರೂಪಾ, ಲತಾ, ಗೋವಿಂದಪ್ಪ, ನಾಗರಾಜ, ಮಹಾಲಿಂಗಯ್ಯ, ವಸಂತ, ಶಾರದಮ್ಮ  ಮತ್ತು ಸತೀಶ್ ಸೇರಿದಂತೆ ಇನ್ನಿತರರು ಸಹಿಯೊಂದಿಗೆ ಮನವಿ ಮಾಡಿದ್ದಾರೆ.

No comments:

Post a Comment