ಭದ್ರಾವತಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಅಂತರಗಂಗೆ ಕ್ಷೇತ್ರದ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷರಾಗಿ ಕಲ್ಲಹಳ್ಳಿ ಕ್ಷೇತ್ರದ ನೇತ್ರಾಬಾಯಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಭದ್ರಾವತಿ, ಜು. ೮: ಉಳಿದ ೧೦ ತಿಂಗಳ ಅವಧಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡು ಸ್ಥಾನಗಳು ಜೆಡಿಎಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಅಂತರಗಂಗೆ ಕ್ಷೇತ್ರದ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷರಾಗಿ ಕಲ್ಲಹಳ್ಳಿ ಕ್ಷೇತ್ರದ ನೇತ್ರಾಬಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾಬಾಯಿ ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಉಪವಿಭಾಗಧಿಕಾರಿ ಟಿ.ವಿ ಪ್ರಕಾಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನಾಮಪತ್ರಗಳ ಪರಿಶೀಲನೆ ನಡೆದ ನಂತರ ಮಧ್ಯಾಹ್ನ ಸುಮಾರು ೧ ಗಂಟೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಘೋಷಿಸಿದರು.
ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಪ್ಪಂದದ ಪ್ರಕಾರ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಎರಡು ಪಕ್ಷಗಳು ಅಧಿಕಾರವನ್ನು ಹಂಚಿಕೆ ಮಾಡಿಕೊಂಡು ಮುನ್ನಡೆಯುತ್ತಿವೆ.
ಒಪ್ಪಂದದ ಪ್ರಕಾರ ಕಾಂಗ್ರೆಸ್ ಪಕ್ಷದ ಆಶಾ ಶ್ರೀಧರ್ ಅಧ್ಯಕ್ಷರಾಗಿ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರೆವಾದ ಸ್ಥಾನಕ್ಕೆ ಚುನಾವಣೆ ನಡೆದು ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಆಯ್ಕೆಯಾಗಿದ್ದಾರೆ.
ಒಟ್ಟು ೧೯ ಸದಸ್ಯ ಬಲ ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ ೯ ಜೆಡಿಎಸ್, ೬ ಕಾಂಗ್ರೆಸ್ ಮತ್ತು ೪ ಬಿಜೆಪಿ ಸದಸ್ಯರಿದ್ದಾರೆ.
ಚುನಾವಣೆ ಕರ್ತವ್ಯದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೊಟ್ರೇಶಪ್ಪ ಪಾಲ್ಗೊಂಡಿದ್ದರು. ತಾಲೂಕು ಪಂಚಾಯಿತಿ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.
ನೂತನ ಅಧ್ಯಕ್ಷರು-ಉಪಾಧ್ಯಕ್ಷರಿಗೆ ಅಭಿನಂದನೆ:
ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷೆ ನೇತ್ರಾಬಾಯಿ ಅವರಿಗೆ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಾಲೂಕು ಪಂಚಾಯಿತಿ ಎಲ್ಲಾ ಸದಸ್ಯರು, ಜಿ.ಪಂ. ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಅಭಿನಂದಿಸಿದರು.
No comments:
Post a Comment