Wednesday, July 8, 2020

ಭದ್ರಾವತಿ : ೩ ಮಂದಿಗೆ ಕೊರೋನಾ ಸೋಂಕು

ಭದ್ರಾವತಿ, ಜು. ೮: ನಗರದಲ್ಲಿ ಪುನಃ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನಿಂದ ಬಂದಿರುವ ಸುಮಾರು ೪೧ ವರ್ಷದ ವ್ಯಕ್ತಿ ಹಾಗೂ ಪ್ರಾಥಮಿಕ ನಿಗಾದಲ್ಲಿರಿಸಲಾಗಿದ್ದ ಇಬ್ಬರು ಮಹಿಳೆಯರಲ್ಲಿ ಬುಧವಾರ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 
ವಿದ್ಯಾಮಂದಿರದ ೨ನೇ ತಿರುವಿನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಬಂದಿದ್ದು, ಸೋಂಕು ಕಾಣಿಸಿಕೊಂಡಿದೆ. ಇದು ಹೊಸ ಪ್ರಕರಣವಾಗಿದ್ದು, ಉಳಿದಂತೆ ಹಳೇನಗರದ ಗಾಂಧಿನಗರದ ಮೊದಲಿಯಾರ್ ಸಮುದಾಯ ಭವನ ಸಮೀಪ ಒಂದು ಕುಟುಂಬದ ೫ ಮಂದಿಯಲ್ಲಿ ಈ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಕುಟುಂಬದ ೩ ಮಂದಿಯನ್ನು ಪ್ರಾಥಮಿಕ ನಿಗಾದಲ್ಲಿರಿಸಲಾಗಿತ್ತು. ಈ ಪೈಕಿ ೪೧ ವರ್ಷದ ತಾಯಿ ಹಾಗೂ ೧೮ ಮಗಳು ಸೋಂಕಿಗೆ ಒಳಗಾಗಿದ್ದಾರೆ. 
ವಿದ್ಯಾಮಂದಿರದಲ್ಲಿ ವ್ಯಕ್ತಿ ವಾಸವಿದ್ದ ಸ್ಥಳದ ೧೦೦ ಮೀ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಗರಸಭೆ ಆಡಳಿತ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. 
ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು ೭ ಸೀಲ್‌ಡೌನ್ ಪ್ರದೇಶಗಳು ಜಾಲ್ತಿಯಲ್ಲಿದ್ದು, ಈಗಾಗಲೇ ಚನ್ನಗಿರಿ ರಸ್ತೆ, ಉಪ್ಪಾರ ಬೀದಿ ಹಾಗೂ ಗಾಂಧಿನಗರ ವ್ಯಾಪ್ತಿಯಲ್ಲಿ ಸೀಲ್‌ಡೌನ್ ತೆರವುಗೊಳಿಸಲಾಗಿದೆ. ಸೀಲ್‌ಡೌನ್ ಹೆಚ್ಚಾದಂತೆ ಸ್ಥಳೀಯರಲ್ಲಿ ಆತಂಕ ಸಹ ಹೆಚ್ಚಾಗುತ್ತಿದೆ.

No comments:

Post a Comment