Monday, August 17, 2020

ಸುಗಮ ಸಂಗೀತ ಕಲಾವಿದ ಕೆ.ಆರ್ ಸುಬ್ರಮಣ್ಯ ನಿಧನ

ಕೆ.ಆರ್ ಸುಬ್ರಮಣ್ಯ
ಭದ್ರಾವತಿ, ಆ. ೧೭: ಹಳೇನಗರದ ನಿವಾಸಿ, ಆಕಾಶವಾಣಿ ಸಂಗೀತ ಕಲಾವಿದ ಕೆ.ಆರ್ ಸುಬ್ರಮಣ್ಯ ನಿಧನ ಹೊಂದಿದರು.
        ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೃತರು ಈ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿ ಕೆಲವು ದಿನಗಳ ಹಿಂದೆ ಚಿಕಿತ್ಸೆಯಿಂದ ಗುಣಮುಖರಾಗಿದ್ದರು. ಹೃದಯ ಸಂಬಂಧಿ ಕಾಯಿಲೆ ಹಿನ್ನಲೆಯಲ್ಲಿ ತಪಾಸಣೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
       ಕೆ.ಆರ್ ಸುಬ್ರಮಣ್ಯರವರು ಬಾಲ್ಯದಿಂದಲೂ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದುವ ಮೂಲಕ ಸುಗಮ ಸಂಗೀತ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಆಕಾಶವಾಣಿ, ದೂರದರ್ಶನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಮಲೆನಾಡು ಕಲಾವಿದರು ತಂಡವನ್ನು ರಚಿಸಿಕೊಂಡು ಸಾರ್ವಜನಿಕ ಸಭೆ, ಸಮಾರಂಭಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಅಲ್ಲದೆ ಮನೆಯಲ್ಲಿಯೇ ಮಕ್ಕಳಿಗೆ ಸುಗಮ ಸಂಗೀತ ಹೇಳಿಕೊಡುವ ಜೊತೆಗೆ ಬೇಸಿಗೆ ಶಿಬಿರಗಳನ್ನು ಸಹ ಆಯೋಜಿಸುತ್ತಿದ್ದರು.
   ಜೀವನ ನಿರ್ವಹಣೆಗಾಗಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಪಿಗ್ಮಿ ಸಂಗ್ರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ವರ್ಷ ತ್ಯಾಗರಾಜರ ಆರಾಧನೆ ಸಂದರ್ಭದಲ್ಲಿ ತ್ಯಾಗರಾಜರ ವೇಷಭೂಷಣದೊಂದಿಗೆ ಕಂಗೊಳಿಸುತ್ತಿದ್ದರು.
     ಮೃತರ ನಿಧನಕ್ಕೆ ತಾಲೂಕು ಬ್ರಾಹ್ಮಣ ಸಮಾಜ, ಶಾಂತಲ ಕಲಾ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

No comments:

Post a Comment