Monday, August 17, 2020

ಜನ್ನಾಪುರ ನಗರ ಆರೋಗ್ಯ ಕೇಂದ್ರದ ಕೋವಿಡ್-೧೯ ತಪಾಸಣಾ ಕೇಂದ್ರ ಸ್ಥಳಾಂತರಕ್ಕೆ ಆಗ್ರಹ

ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ  


ಭದ್ರಾವತಿ ಜನ್ನಾಪುರ ಎನ್‌ಟಿಬಿ ಲೇಔಟ್ ನಗರಸಭಾ ಶಾಖಾ ಕಛೇರಿ ಆವರಣದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಗರ ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿರುವ ಕೋವಿಡ್-೧೯ ತಪಾಸಣಾ ಕೇಂದ್ರ.
ಭದ್ರಾವತಿ, ಆ. ೧೭: ಜನದಟ್ಟಣೆ ಅಧಿಕವಿರುವ ಜನ್ನಾಪುರ ಎನ್‌ಟಿಬಿ ಲೇಔಟ್‌ನಲ್ಲಿ ತೆರೆಯಲಾಗಿರುವ ಕೋವಿಡ್-೧೯ ತಪಾಸಣಾ ಕೇಂದ್ರವನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಐಎಸ್‌ಎಲ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಒತ್ತಾಯಿಸಿದೆ.
        ಎನ್‌ಟಿಬಿ ಲೇಔಟ್ ನಗರಸಭಾ ಶಾಖಾ ಕಛೇರಿ ಆವರಣದಲ್ಲಿರುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಗರ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ತಪಾಸಣಾ ಕೇಂದ್ರ ತೆರೆಯಲಾಗಿದೆ. ಈ ಆವರಣದಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗಳಿದ್ದು, ಅಲ್ಲದೆ ಮೆಸ್ಕಾಂ ವತಿಯಿಂದ ವಿದ್ಯುತ್ ಬಿಲ್ ಪಾವತಿ ಕೇಂದ್ರ, ತಾಲೂಕು ಆಡಳಿತದಿಂದ ನೆಮ್ಮದಿ ಕೇಂದ್ರ, ನಗರಸಭೆ ವತಿಯಿಂದ ನಗರ ವಸತಿ ರಹಿತ ನಿರ್ಗತಿಕರ ಆಶ್ರಯ ತಂಗುದಾಣ ತೆರೆಯಲಾಗಿದೆ.
       ನಗರಸಭೆ ಶಾಖಾ ಕಛೇರಿಗೆ ಪ್ರತಿ ದಿನ ಬೆಳಿಗ್ಗೆ ಪೌರಕಾರ್ಮಿಕರು,  ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಬಂದು ಹೋಗುತ್ತಾರೆ. ಮೆಸ್ಕಾಂ ವಿದ್ಯುತ್ ಬಿಲ್ ಪಾವತಿ ಕೇಂದ್ರ ಮತ್ತು ನೆಮ್ಮದಿ ಕೇಂದ್ರಗಳಿಗೆ ನೂರಾರು ಮಂದಿ ಬಂದು ಹೋಗುತ್ತಾರೆ. ಒಟ್ಟಾರೆ ಪ್ರತಿದಿನ ೫೦೦ಕ್ಕೂ ಹೆಚ್ಚು ಮಂದಿ ಬಂದು ಹೋಗುತ್ತಾರೆ. ಅಲ್ಲದೆ ಸಮೀಪದಲ್ಲಿಯೇ ಎಂಎಸ್‌ಐಎಲ್ ಮದ್ಯದಂಗಡಿ, ೨ ಖಾಸಗಿ ಕ್ಲಿನಿಕ್‌ಗಳು, ವಿದ್ಯಾಸಂಸ್ಥೆ ಹಾಗು ಅಂಗಡಿ ಮುಂಗಟ್ಟುಗಳಿವೆ. ಈಗಾಗಲೇ ತಾಲೂಕಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನದಟ್ಟಣೆ ಅಧಿಕವಿರುವ ಸ್ಥಳದಲ್ಲಿ ಸೋಂಕು ಶೀಘ್ರವಾಗಿ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಸೋಂಕು ಹೊಂದಿರುವ ವ್ಯಕ್ತಿಗಳು ಈ ಭಾಗದಲ್ಲಿ ಎಲ್ಲಿಬೇಕೆಂದರಲ್ಲಿ ಓಡಾಡುವುದು ಕಂಡು ಬರುತ್ತಿದೆ. ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-೧೯ ತಪಾಸಣಾ ಕೇಂದ್ರವನ್ನು ತಕ್ಷಣ ಸ್ಥಳಾಂತರಿಸುವಂತೆ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಕಾರ್ಯಾಧ್ಯಕ್ಷೆ ರಮಾ ವೆಂಕಟೇಶ್ ಮನವಿಯಲ್ಲಿ ಆಗ್ರಹಿಸಿದ್ದಾರೆ.  

No comments:

Post a Comment