Friday, August 14, 2020

ಮದ್ಯಪಾನ, ಧೂಮಪಾನ ನಿಷೇಧಕ್ಕೆ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಹೋರಾಟ : ಲಕ್ಕಣ್ಣ ಗೌಡ

ಭದ್ರಾವತಿಗೆ ಆಗಮಿಸಿದ್ದ ಸಂಯುಕ್ತ ಜನಾತದಳ ಕಾರ್ಯಾಧ್ಯಕ್ಷ ಲಕ್ಕಣ್ಣ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಆ. ೧೪: ರಾಜ್ಯದಲ್ಲಿ ಧೂಮಪಾನ ಮತ್ತು ಮದ್ಯಪಾನ ಸಂಪೂರ್ಣವಾಗಿ ನಿಷೇಧ ಮಾಡಬೇಕೆಂಬುದು ಸಂಯುಕ್ತ ಜನತಾದಳದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ  ಲಕ್ಕಣ್ಣ  ಗೌಡ ತಿಳಿಸಿದರು.
     ಅವರು ನಗರದಲ್ಲಿ ಯುವ ಘಟಕದ ತಾಲೂಕು ಪದಾಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಪಕ್ಷದ ಸಿದ್ದಾಂತದಂತೆ ಹೋರಾಟ ನಡೆಸಲಾಗುತ್ತಿದೆ. ಮೊದಲು ಧೂಮಪಾನ, ಮಧ್ಯಪಾನ ನಿಷೇಧವಾಗಬೇಕು. ಪ್ರಸ್ತುತ ಕೋವಿಡ್-೧೯ರ ಪರಿಣಾಮ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಹಣ ಬಲವಂತವಾಗಿ ವಸೂಲಾತಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ವಿರುದ್ಧ ಸಹ ಪಕ್ಷ ಹೋರಾಟ ನಡೆಸುತ್ತಿದೆ ಎಂದರು.
      ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಸಮರ್ಥ ಹಾಗೂ ನಿಷ್ಠಾವಂತ ಹೋರಾಟಗಾರರನ್ನು ಗುರುತಿಸಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ರಾಜ್ಯಾಧ್ಯಕ್ಷರಾದ ಮಹಿಳಾ ಜೆ. ಪಟೇಲ್ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಾಗರಾಜ್‌ರವರ ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
     ಜಿಲ್ಲೆಯಲ್ಲಿ ಕೈಗರಿಕಾ ನಗರವಾಗಿರುವ ಭದ್ರಾವತಿ ಇಂದಿನ ಪರಿಸ್ಥಿತಿ ಬಗ್ಗೆ ಹೆಚ್ಚಿನ ಅರಿವಿದೆ. ಈಗಾಗಲೇ ಮುಂದಿನ ದಿನಗಳಲ್ಲಿ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಪಡಿಸಿಕೊಳ್ಳಲಾಗಿದೆ. ಸ್ಥಳೀಯ ಮುಖಂಡರೊಂದಿಗೆ ಹೋರಾಟ ನಡೆಸಲಾಗುವುದು ಎಂದರು.
     ಪಕ್ಷದ ಮುಖಂಡರಾದ ಶಶಿಕುಮಾರ್ ಎಸ್. ಗೌಡ, ಬಾಬು ದೀಪಕ್‌ಕುಮಾರ್, ಗಂಗಾರಾಜ್, ಬಿ.ಆರ್ ಜಗನ್ನಾಥರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment