Wednesday, October 7, 2020

ಹೃದಯ ಶ್ರೀಮಂತಿಕೆ ವ್ಯಕ್ತಿಗಳಿಂದ ಯಾವುದೇ ಕಾರ್ಯ ಯಶಸ್ವಿ : ಅಪೇಕ್ಷ ಮಂಜುನಾಥ್

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಎಸ್. ಶ್ರೀನಿವಾಸ್ ದತ್ತಿ ದಾನಿಗಳ ಸಹಕಾರದೊಂದಿಗೆ ಮನೋಜ್ ದತ್ತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂಧ ಮಕ್ಕಳಿಂದ ಸುಗಮ ಸಂಗೀತ ಹಾಗು ಗಾನಗಾರುಡಿಗ ಡಾ. ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ನುಡಿ ನಮನವನ್ನು ಉದ್ಯಮಿ ಎನ್. ಪ್ರಕಾಶ್‌ಕುಮಾರ್ ಉದ್ಘಾಟಿಸಿದರು.
ಭದ್ರಾವತಿ, ಅ. ೭: ಹೃದಯ ಶ್ರೀಮಂತಿಕೆ ವ್ಯಕ್ತಿಗಳಿಂದ ಮಾತ್ರ ಯಾವುದೇ ಕಾರ್ಯ ಯಶಸ್ವಿಯಾಗಿ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಅಂತಹ ವ್ಯಕ್ತಿಗಳನ್ನು ಸಮಾಜ ಗುರುತಿಸಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಹೇಳಿದರು.
       ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಎಸ್. ಶ್ರೀನಿವಾಸ್ ದತ್ತಿ ದಾನಿಗಳ ಸಹಕಾರದೊಂದಿಗೆ ಮನೋಜ್ ದತ್ತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂಧ ಮಕ್ಕಳಿಂದ ಸುಗಮ ಸಂಗೀತ ಹಾಗು ಗಾನಗಾರುಡಿಗ ಡಾ. ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ನುಡಿ ನಮನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಪರಿಷತ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಪ್ರತಿಯೊಂದು ಕಾರ್ಯಕ್ರಮ ಸಹ ಒಂದೊಂದು ವಿಶೇಷತೆಯಿಂದ ಕೂಡಿವೆ. ಅಂಧ ವಿಕಲಚೇತನರೊಂದಿಗೆ ಕಾರ್ಯಕ್ರಮ ಆಯೋಜಿಸಿರುವುದು ತುಂಬ ಸಂತೋಷವನ್ನುಂಟು ಮಾಡಿದೆ.  ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ಉದ್ಯಮಿ ಎನ್, ಪ್ರಕಾಶ್‌ಕುಮಾರ್‌ರವರ ಸಹಕಾರ ಹೆಚ್ಚಿನದ್ದಾಗಿದೆ.  ಹೃದಯ ಶ್ರೀಮಂತಿಕೆಗೆ ಹೆಚ್ಚಿನ ಮಹತ್ವ ನೀಡುವ ಅವರ ಗುಣ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳಿಂದ ವಿಕಲಚೇತನರು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
      ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮಾತನಾಡಿ, ಪರಿಷತ್ ವತಿಯಿಂದ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತಷ್ಟು ಪ್ರಜ್ವಲಗೊಳಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಅಂಧರ ಕೇಂದ್ರದಲ್ಲೂ ಹಲವಾರು ಕಾರ್ಯಕ್ರಮಗಳನ್ನು ಪರಿಷತ್ ಆಯೋಜಿಸಿಕೊಂಡು ಬರುತ್ತಿದೆ. ಇಂದಿನ ಕಾರ್ಯಕ್ರಮ ಅಂಧರ ಕೇಂದ್ರಕ್ಕೆ ಮತ್ತಷ್ಟು ಸ್ಪೂರ್ತಿಯನ್ನುಂಟು ಮಾಡಿದೆ ಎಂದರು.
      ಆಡಳಿತಾಧಿಕಾರಿ ಶಾರದ ಶಿವಬಸಪ್ಪ, ಕಸಾಪ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿಗಳಾದ ಚನ್ನಪ್ಪ, ವೈ.ಕೆ ಹನುಮಂತಯ್ಯ ಹಾಗು ಸಂಚಾಲಕ ಚಂದ್ರಶೇಖರಪ್ಪ ಚಕ್ರಸಾಲಿ, ಗೌರಿ ಗ್ಯಾಸ್‌ನ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment