ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪ
ಎಚ್. ರವಿಕುಮಾರ್
ಭದ್ರಾವತಿ, ಅ. ೩: ಕೊರೋನಾ ಸೋಂಕು ಹರಡುವುದನ್ನು ತಡೆಯಲು ವಿಫಲವಾಗಿರುವ ರಾಜ್ಯ ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವ ಜೊತೆಗೆ ಅಧಿಕ ಪ್ರಮಾಣದ ದಂಡ ವಿಧಿಸುವ ಮೂಲಕ ಲೂಟಿಗೆ ಮುಂದಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
ಈ ಹಿಂದೆ ಮಾಸ್ಕ್ ಧರಿಸದವರಿಗೆ ೨೦೦ ರು. ದಂಡ ನಿಗದಿ ಮಾಡಿತ್ತು. ದಂಡದ ರೂಪದಲ್ಲಿ ಬೊಕ್ಕಸಕ್ಕೆ ಕೋಟ್ಯಾಂತರ ರು. ಹರಿದು ತಕ್ಷಣ ಹಣದ ಆಸೆಗೆ ಬಿದ್ದು ಇದೀಗ ನಗರ ಭಾಗದಲ್ಲಿ ದಂಡದ ಮೊತ್ತ ೧,೦೦೦ ರು., ಗ್ರಾಮೀಣ ಭಾಗದಲ್ಲಿ ೫೦೦ ರು. ನಿಗದಿ ಮಾಡಿ ಜನ ಸಾಮಾನ್ಯರ ಲೂಟಿಗೆ ಮುಂದಾಗಿದೆ.
ಸರ್ಕಾರ ಜನಸಾಮಾನ್ಯರಿಗೆ ಇದುವರೆಗೂ ಒಂದೇ ಒಂದು ಮಾಸ್ಕ್ ಉಚಿತವಾಗಿ ಕೊಟ್ಟಿಲ್ಲ. ಈ ನಡುವೆ ದಂಡ ವಸೂಲಿಗೆ ನೇಮಿಸಿರುವವರು ಹಾಗು ಪೊಲೀಸರು ದಂಡ ವಸೂಲಿ ಮಾಡುವ ನೆಪದಲ್ಲಿ ಜನಸಾಮಾನ್ಯರ ಬಳಿ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇವರು ಜನರನ್ನು ಹೆದರಿಸುತ್ತಿದ್ದಾರೆಯೇ ಹೊರತು, ಕೊರೋನಾ ಸೋಂಕು ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಒಬ್ಬ ವ್ಯಕ್ತಿಯ ದಿನದ ಕೂಲಿ ೩೫೦ ರಿಂದ ೪೦೦ ರು. ಇದೆ. ಪರಿಸ್ಥಿತಿ ಈ ರೀತಿ ಇರುವಾಗ ದಿನದ ಕೂಲಿಯನ್ನು ನಂಬಿ ಬದುಕುತ್ತಿರುವವರಿಂದ ೫೦೦ ರು. ದಂಡ ವಸೂಲಾತಿ ಮಾಡುತ್ತಿರುವುದು ಖಂಡನೀಯ. ತಕ್ಷಣ ದಂಡ ಮೊತ್ತ ಕಡಿಮೆ ಮಾಡಿ ಉಚಿತವಾಗಿ ಮಾಸ್ಕ್ ವಿತರಿಸುವ ಜೊತೆಗೆ ಅರಿವು ಮೂಡಿಸಬೇಕೆಂದು ಆಗ್ರಹಿಸಿದ್ದಾರೆ.
No comments:
Post a Comment