Sunday, October 4, 2020

ಜನಪ್ರತಿನಿಧಿಗಳಿಗೆ ಸಮಾಜವಾದಿ ಚಿಂತನೆಗಳು ಅಗತ್ಯ : ತೇಜಸ್ವಿ ವಿ. ಪಟೇಲ್


ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಭದ್ರಾವತಿ ಕಾಂಚನಾ ಹೋಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್ ಪಟೇಲ್‌ರವರ ೯೦ನೇ ಜನ್ಮದಿನ ಕಾರ್ಯಕ್ರಮವನ್ನು ರೈತ  ಮುಖಂಡ ತೇಜಸ್ವಿ ವಿ. ಪಟೇಲ್, ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೪: ಸಮಾಜವಾದಿ ಚಿಂತನೆಗಳು ಇದ್ದಾಗ ಮಾತ್ರ ಒಬ್ಬ ಜನಪ್ರತಿನಿಧಿ ಪ್ರಬುದ್ಧವಾಗಿ ಬೆಳೆಯಲು ಸಾಧ್ಯ ಎಂದು ರೈತ  ಮುಖಂಡ ತೇಜಸ್ವಿ ವಿ. ಪಟೇಲ್ ಹೇಳಿದರು.
        ಅವರು ಭಾನುವಾರ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ನಗರದ ಕಾಂಚನಾ ಹೋಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಎಚ್ ಪಟೇಲ್‌ರವರ ೯೦ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
         ಜೆ.ಎಚ್ ಪಟೇಲ್‌ರವರ ಸಮಾಜವಾದಿ ಚಿಂತನೆಗಳು ಇಂದಿಗೂ ಅವರನ್ನು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವಂತೆ ಮಾಡಿವೆ. ನೇರ ನುಡಿ-ನಡೆ ವ್ಯಕ್ತಿತ್ವದ ಗುಣ, ಸಾಮಾನ್ಯರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ, ಭವಿಷ್ಯದ ಚಿಂತನೆಗಳು ಪಟೇಲ್‌ರವರಲ್ಲಿ ಕಂಡು ಬರುವ ವಿಶೇಷತೆಗಳಾಗಿದ್ದವು ಎಂದರು.
         ದಲಿತ ಹಾಗು ರೈತ ಚಳುವಳಿಗಳು ಉದಯಿಸಿದ, ಸಮಾಜವಾದಿ ಹೋರಾಟಗಳಿಗೆ ನೆಲೆಯಾಗಿದ್ದ, ರಾಷ್ಟ್ರ ಹಾಗು ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಸಮಾಜವಾದಿ ಚಿಂತನೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ಕೆಲವರು ಜೆ.ಎಚ್ ಪಟೇಲ್‌ರವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಅವರನ್ನು ನೆನಪು ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ  ಎಂದರು.
        ಹಿರಿಯ ಮುಖಂಡ ಗೋವಿಂದಸ್ವಾಮಿ ಮಾತನಾಡಿ, ಜೆ.ಎಚ್ ಪಟೇಲ್‌ರವರು ಎಲ್ಲಾ ಧರ್ಮ, ಜಾತಿ, ಸಮುದಾಯಗಳ ಏಳಿಗೆಯನ್ನು ಬಯಸಿದ್ದರು. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಎಂದಿಗೂ ಅವರು ನಮ್ಮೊಂದಿಗೆ ಶಾಶ್ವತವಾಗಿ ಉಳಿದುಕೊಳ್ಳುವಂತೆ ಮಾಡಿವೆ ಎಂದರು.
        ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ಪ್ರಸ್ತುತ ನಾವೆಲ್ಲರೂ ಪಟೇಲ್‌ರವರ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕಾದ ಅಗತ್ಯವಿದೆ ಎಂದರು.
      ಶಿರಸ್ತೇದಾರ್ ಮಂಜಾನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್,  ಕಲಾವತಿ, ದಿವ್ಯಶ್ರೀ, ರವಿ ಕಿಶನ್, ಬಿ.ಗಂಗಾಧರ್, ಕೆ. ಪ್ರಸಾದ್, ಸಿದ್ದಲಿಂಗಯ್ಯ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ಸತ್ಯನಾರಾಯಣ, ನಲ್ಲೂರು ಉಸ್ಮಾನ್ ಷರೀಫ್, ಬಿ.ಎನ್ ರಾಜು ಮತ್ತು ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಜೆಡಿಯು ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ  ಹಾಗು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


No comments:

Post a Comment