ಅಖಿಲ ಕರ್ನಾಟಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಛೇರಿ ಭದ್ರಾವತಿಯಲ್ಲಿ ಭಾನುವಾರ ಉದ್ಘಾಟನೆ ಗೊಂಡಿತು. ಸಂಘದ ಅಧ್ಯಕ್ಷ ಬಿ.ಆರ್ ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಅ. ೪: ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆ ಅಗತ್ಯವಿದ್ದು, ಎಲ್ಲರೂ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಹಿರಿಯ ಕಲಾವಿದ, ಅಖಿಲ ಕರ್ನಾಟಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್ ಗೋಪಾಲ್ ಮನವಿ ಮಾಡಿದರು.
ಅವರು ಭಾನುವಾರ ನಗರದ ಸಿ.ಎನ್ ರಸ್ತೆಯಲ್ಲಿ ಸಂಘದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು. ಕಳೆದ ೫ ವರ್ಷಗಳಿಂದ ಸಂಘಟನೆ ಅಸ್ತಿತ್ವದಲ್ಲಿದ್ದು, ಪ್ರಸ್ತುತ ಮತ್ತಷ್ಟು ಕ್ರಿಯಾಶೀಲವಾಗಿಸುವ ಅಗತ್ಯವಿದೆ. ಈ ಮೂಲಕ ಕಲಾವಿದರ ಸಂಕಷ್ಟಗಳನ್ನು ಸಾಧ್ಯವಾದಷ್ಟು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಮತ್ತು ಭದ್ರಾವತಿ ೨ ಎರಡು ನಗರಗಳು ಮಾತ್ರ ಕಲಾವಿದರ ನೆಲೆಬೀಡಾಗಿವೆ. ಎಲ್ಲಾ ರೀತಿಯ ಕಲಾವಿದರು ಈ ಎರಡು ನಗರಗಳಲ್ಲಿ ಇದ್ದು, ಬಹಳಷ್ಟು ಕಲಾವಿದರು ಈ ನಗರಗಳಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕಲಾವಿದರು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘಟನೆ ಕಲಾವಿದರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಜಗನ್ನಾಥ್, ಹಿರಿಯ ಸಲಹೆಗಾರ ನೂರುಲ್ಲಾ, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾ ಮೋಹನ್, ಡಿಎಸ್‌ಎಸ್ ಮುಖಂಡರಾದ ಎಂ. ಪಳನಿರಾಜ್, ಎಂ. ಕುಬೇಂದ್ರಪ್ಪ, ಸಾಹಿತಿ ಜೆ.ಎನ್ ಬಸವರಾಜಪ್ಪ, ನ್ಯಾಯವಾದಿ ಅಖಿಲ್ ಅಹಮದ್, ಪ್ರಮುಖರಾದ ಮೋಹನ್, ಸಿದ್ದೇಶ್, ರಾಜು, ಅಹಮದ್ ಜಾನ್(ಬಾಬು), ಶಂಕರ್ ಬಾಬು, ನಸ್ರುಲ್ಲಾ ಷರೀಫ್, ಪ್ರವೀಣ್, ಮಂಜಣ್ಣ, ಆರ್. ರಂಗರಾಮ್, ಅವಿನಿ, ಅಂಬಿಕಾ, ಶಿಲ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಡಾ.ಎಸ್.ಪಿ ಬಾಲಸುಬ್ರಮಣ್ಯಂರವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಭಾವಚಿತ್ರ ಪುಷ್ಪನಮನ ಸಲ್ಲಿಸಲಾಯಿತು.
No comments:
Post a Comment