Saturday, December 12, 2020

ತಕ್ಷಣ ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಿ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
     ಭದ್ರಾವತಿ, ಡಿ. ೧೨: ಸರ್ಕಾರ ತಕ್ಷಣ ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಶಾಸಕ ಬಿ ಕೆ ಸಂಗಮೇಶ್ವರ್ ಆಗ್ರಹಿಸಿದರು.
     ಅವರು ಶನಿವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಮುಷ್ಕರ ನಡೆಸುತ್ತಿರುವ ನೌಕರರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಹೋರಾಟ ನಡೆಸುವುದು ಪ್ರತಿಯೊಬ್ಬರ ಹಕ್ಕು. ನೌಕರರನ್ನು ಎಸ್ಮಾ ಕಾಯ್ದೆ ಮೂಲಕ ಬೆದರಿಸುವುದು ಸರಿಯಲ್ಲ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೂ ನೌಕರರು ಮನವಿ ಸಲ್ಲಿಸಿದ್ದರು. ಆದರೆ ಕೆಲವು ಕಾರಣಾಂತರಗಳಿಂದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ನೌಕರರು ತಮಗೆ ಬರುವ ವೇತನದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ಸೌಲಭ್ಯಗಳು ಇವರಿಗೂ ಸಿಗುವಂತಾಗಬೇಕೆಂದರು.
     ಪ್ರಸ್ತುತ ರಾಜ್ಯದಲ್ಲಿರುವ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ನಿರುದ್ಯೋಗ ಸಮಸ್ಯೆ ಹಾಗು ಬಡತನ ಹೆಚ್ಚಾಗುತ್ತಿದೆ. ಇವುಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಮುಷ್ಕರ ನಿರತ ಮುಖಂಡರು ಮಾತಮಾಡಿ, ಸರ್ಕಾರದ ವಿರುದ್ಧ ಹೋರಾಟ ನಡೆಸುವ ಅಗತ್ಯವಿರಲಿಲ್ಲ. ಆರಂಭದಲ್ಲಿ ನಾವುಗಳು ಮುಖ್ಯಮಂತ್ರಿಗಳಿಗೆ ಕೇವಲ ಮನವಿ ಸಲ್ಲಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಮುಖ್ಯಮಂತ್ರಿಗಳು ನಮ್ಮ ಮನವಿ ಸ್ವೀಕರಿಸುವ ಬದಲು ನೌಕರರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ೧,೩೬,೦೦೦ ನೌಕರರಿಗೆ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆಂದು ದೂರಿದರು. ಈ ಹಿನ್ನಲೆಯಲ್ಲಿ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದರು.
      ಪ್ರಮುಖರಾದ ನಾರಾಯಣ, ದೇವರಾಜ್, ಚಲುವರಾಜ್, ಸುರೇಂದ್ರ, ಶಕುಂತಲ, ಸಂಗೀತ, ರೇಣುಕಾ ಸೇರಿದಂತೆ ಭದ್ರಾವತಿ ಘಟಕದಲ್ಲಿ ನಿರ್ವಹಿಸುತ್ತಿರುವ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

No comments:

Post a Comment