Friday, January 15, 2021

ಜ.೧೬ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ :

ಹಲವು ನಿರೀಕ್ಷೆಗಳೊಂದಿಗೆ ಎದುರು ನೋಡುತ್ತಿದೆ ಕೈಗಾರಿಕಾ ನಗರ

* ಅನಂತಕುಮಾರ್
    ಭದ್ರಾವತಿ, ಜ. ೧೫; ಸುಮಾರು ಮೂರು ದಶಕಗಳಿಂದ ಅಭಿವೃದ್ಧಿ ಕಾಣದ ಕೈಗಾರಿಕಾ ನಗರದಲ್ಲಿ ಇದೀಗ ಚೈತನ್ಯದ ಚಿಲುಮೆ ಕಂಡು ಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಘಟಕ ನಗರದಲ್ಲಿ ಆರಂಭಗೊಳ್ಳುತ್ತಿರುವುದು. ಇದಕ್ಕಿಂತ ಮುಖ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ೨ನೇ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಜನರು ಹಲವು ನಿರೀಕ್ಷೆಗಳೊಂದಿಗೆ ಮುಂದಿನ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ.
    ಸಾಮಾನ್ಯ ಜನರಲ್ಲಿ ಆರ್‌ಎಎಫ್ ಘಟಕ ಆರಂಭಗೊಳ್ಳುತ್ತಿದೆ ಎಂದರೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿರಬಹುದೆಂಬ ಎಂಬ ಭಾವನೆ ಮೂಡುವುದು ಸಹಜ.  ಬದಲಾಗಿ ಹೊಸ ಉದ್ಯೋಗ ಅವಕಾಶಗಳು ಈ ಮೂಲಕ ಇಲ್ಲಿನ ಜನರಿಗೆ ಲಭಿಸುತ್ತದೆ ಎಂಬ ಪರಿಕಲ್ಪನೆ ಬಾರದಿರುವುದು ಸಹ ಸಹಜ ಎಂದರೆ ತಪ್ಪಾಗಲಾರದು.  
    ಜ.೧೬ರಂದು ನಗರದ ಮಿಲ್ಟ್ರಿಕ್ಯಾಂಪ್ ಬುಳ್ಳಾಪುರದಲ್ಲಿ ಆರ್‌ಎಎಫ್ ಘಟಕದ ಶಂಕುಸ್ಥಾಪನೆ ನೆರವೇರುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಪರ ಪ್ರಚಾರಗಾಗಿ ನಗರಕ್ಕೆ ಆಗಮಿಸಿದ್ದರು. ನಗರದ ರಂಗಪ್ಪ ವೃತ್ತದಿಂದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಜಾಥಾ ನಡೆಸಿದ್ದರು. ಇದೀಗ ೨ನೇ ಬಾರಿಗೆ ಆಗಮಿಸುತ್ತಿದ್ದು, ಕ್ಷೇತ್ರದ ಜನರು ಹಲವು ನಿರೀಕ್ಷೆಗಳೊಂದಿಗೆ ಆಮಿತ್ ಶಾ ಆಗಮನವನ್ನು ಎದುರು ನೋಡುತ್ತಿದ್ದಾರೆ.
     ಕ್ಷೇತ್ರದಲ್ಲಿ ಒಂದೆಡೆ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಸ್ಥಗಿತಗೊಂಡು ಸುಮಾರು ೫ ವರ್ಷಗಳು ಕಳೆದಿವೆ. ಮತ್ತೊಂದೆಡೆ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಳುಗುವ ಹಂತಕ್ಕೆ ಬಂದು ತಲುಪಿದೆ. ಈ ನಡುವೆ ಎಂಪಿಎಂ ಸಕ್ಕರೆ ಘಟಕ ಸಹ ಸ್ಥಗಿತಗೊಂಡಿರುವ ಕಾರಣ ಕಬ್ಬು ಬೆಳೆಗಾರರು ಪರ್ಯಾಯ ಬೆಳೆಗಳ ಕಡೆ ಗಮನ ಹರಿಸಿದ್ದಾರೆ. ಭೂಮಿ ನಂಬಿ ಬದುಕು ಕಟ್ಟಿಕೊಂಡಿದ್ದ ಕೆಲವು ರೈತರು ಕೃಷಿಯಿಂದ ವಿಮುಖರಾಗಿದ್ದಾರೆ. ಒಂದೆಡೆ ಕೃಷಿ ಚಟುವಟಿಕೆಗಳು ಸಹ ಇಲ್ಲದೆ, ಕೈಗಾರಿಕೆಗಳು ಸಹ ಅವನತಿ ದಾರಿ ಹಿಡಿದಿರುವುದು. ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ, ಮತ್ತೊಂದೆಡೆ ನಿರುದ್ಯೋಗ ಹೆಚ್ಚಾಗಿದೆ. ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗುವವರ ಸಂಖ್ಯೆ ದಿನದ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಅಮಿತ್ ಶಾ ಆಗಮನ ಕೆಲವು ನಿರೀಕ್ಷೆಗಳೊಂದಿಗೆ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವ ಹೊಸ ಭವಿಷ್ಯವನ್ನು ಸೃಷ್ಟಿಸುವ ಆಶಾಭಾವನೆ ಎದುರು ನೋಡುವಂತಾಗಿದೆ ಎಂದರೆ ತಪ್ಪಾಗಲಾರದು.

No comments:

Post a Comment