ಭದ್ರಾವತಿ ನ್ಯೂಟೌನ್ ಸಿಲ್ವರ್ ಜ್ಯೂಬಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗು ವಕೀಲರ ಸಂಘದ ಸಹಯೋಗದೊಂದಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಫೆ. ೧೨: ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದುವ ಮೂಲಕ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ನ್ಯಾಯವಾದಿ ಎಂ. ಶಿವಕುಮಾರ್ ತಿಳಿಸಿದರು.
ಅವರು ನ್ಯೂಟೌನ್ ಸಿಲ್ವರ್ ಜ್ಯೂಬಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗು ವಕೀಲರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಪ್ರತಿಯೊಬ್ಬರ ರಕ್ಷಣೆಗೆ ಅಗತ್ಯವಿರುವ ಕಾನೂನುಗಳನ್ನು ರೂಪಿಸಲಾಗಿದೆ. ಅದರಲ್ಲೂ ಮಕ್ಕಳ ಮೇಲಿನ ಶೋಷಣೆಗಳಿಗೆ ಸಂಬಂಧಿಸಿದ ಹಲವು ಕಾನೂನುಗಳಿದ್ದು, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲಪರಾಧ, ಬಾಲ್ಯ ವಿವಾಹ, ಕಾನೂನು ಬಾಹಿರ ಚಟುವಟಿಕೆಗಳಿಗೆ ಮಕ್ಕಳ ದುರ್ಬಳಕೆ ಸೇರಿದಂತೆ ಹಲವು ಅಪರಾಧಗಳಿಗೆ ಕಾನೂನುಗಳನ್ನು ರೂಪಿಸಲಾಗಿದೆ. ಆ ಮೂಲಕ ಅಪರಾಧಿಗಳಿಗೆ ಸೂಕ್ತ ಶಿಕ್ಷೆಗಳನ್ನು ನಿಗದಿಪಡಿಸಲಾಗಿದೆ. ಇವುಗಳ ಕುರಿತು ಶಾಲಾ ಮಕ್ಕಳು ತಿಳುವಳಿಕೆ ಹೊಂದಬೇಕೆಂದರು.
ಉಪ ಪ್ರಾಚಾರ್ಯ ಕೆ.ಎಚ್ ಮೋಹನೇಶ್ ಮಾತನಾಡಿ, ದೇಶದಲ್ಲಿ ಹಲವು ಕಾನೂನುಗಳನ್ನು ರೂಪಿಸಲಾಗಿದ್ದರೂ ಸಹ ಅಪರಾಧಗಳ ಪ್ರಮಾಣ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿಯೇ ಕಾನೂನಿನ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಅಪರಾಧಗಳ ಪ್ರಮಾಣ ಕಡಿಮೆಗೊಳಿಸಬಹುದಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮವನ್ನು ಜೆಎಂಎಫ್‌ಸಿ ೧ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಟಿ.ಪಿ ಪುರುಷೋತ್ತಮ್ ಉದ್ಘಾಟಿಸಿದರು. ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ವೈ. ಜಯರಾಂ, ಕಾರ್ಯದರ್ಶಿ ಟಿ.ಎಸ್ ರಾಜು, ಸಿಆರ್‌ಪಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಾಲೆಯ ದೈಹಿಕ ಶಿಕ್ಷಕ ಎನ್.ಕೆ ಪಾಲಾಕ್ಷಪ್ಪ, ಮಹಾದೇವಿ ಪ್ರಾರ್ಥಿಸಿದರು. ಸಹ ಶಿಕ್ಷಕಿ ಛಾಯಾ ಶ್ಯಾಮ್‌ಸುಂದರ್ ವಂದಿಸಿದರು.
No comments:
Post a Comment