ಕೆಲಸ ಖಾತರಿಯೊಂದಿಗೆ ಬಾಕಿ ವೇತನಕ್ಕೆ ವ್ಯವಸ್ಥಾಪಕ ನಿರ್ದೇಶಕರ ಭರವಸೆ
ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಹೊಂದದೆ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೦ ನೌಕರರ ಪೈಕಿ ೧೦೧ ನೌಕರರಿಗೆ ವೇತನ ಬಾಕಿ ನೀಡಲು ಸರ್ಕಾರಕ್ಕೆ ಆಗ್ರಹಿಸುವಂತೆ ನೌಕರರು ಶಾಸಕ ಬಿ.ಕೆ.ಸಂಗಮೇಶ್ವರ್‌ಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಶಾಸಕರು ಕಾರ್ಖಾನೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
ಭದ್ರಾವತಿ, ಫೆ. ೧೨: ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಹೊಂದದೆ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೦ ನೌಕರರ ಪೈಕಿ ೧೦೧ ನೌಕರರಿಗೆ ವೇತನ ಬಾಕಿ ನೀಡಲು ಸರ್ಕಾರಕ್ಕೆ ಆಗ್ರಹಿಸುವಂತೆ ನೌಕರರು ಶಾಸಕ ಬಿ.ಕೆ.ಸಂಗಮೇಶ್ವರ್‌ಗೆ ಮನವಿ ಮಾಡಿದರು.
ಈಗಾಗಲೇ ಸರ್ಕಾರ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಹೊಂದದೆ ಬಾಕಿ ಉಳಿದುಕೊಂಡಿರುವ ನೌಕರರಿಗೆ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯಕ್ಕೆ ನೇಮಿಸಿಕೊಳ್ಳಲು ತೀರ್ಮಾನಿಸಿದೆ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ೧೧೯ ನೌಕರರು ಹೊರತುಪಡಿಸಿ ೧೦೧ ನೌಕರರಿಗೆ ಕಳೆದ ಸುಮಾರು ೫ ತಿಂಗಳಿನಿಂದ ವೇತನ ಇಲ್ಲವಾಗಿದೆ. ಮತ್ತೊಂದೆಡೆ ಈ ನೌಕರರಿಗೆ ಇನ್ನೂ ನಿಗಮ ಮಂಡಳಿಗಳಲ್ಲೂ ಸಹ ಕೆಲಸ ಖಾತರಿಯಾಗಿಲ್ಲ. ಈ ಹಿನ್ನಲೆಯಲ್ಲಿ ಅತಂತ್ರರಾಗಿರುವ ನೌಕರರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವೇತನ ಬಾಕಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.
ಶಾಸಕ ಬಿ.ಕೆ ಸಂಗಮೇಶ್ವರ್ ನೌಕರರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಿ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದರು. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ನೌಕರರ ವೇತನ ಬಾಕಿ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಸದ್ಯಕ್ಕೆ ನೌಕರರು ನಿಯೋಜನೆಗೊಳಿಸಿರುವ ನಿಗಮ ಮಂಡಳಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಸೂಕ್ತ. ಇದರಿಂದ ನೌಕರರ ಕೆಲಸ ಖಾತರಿಯಾಗುವ ವಿಶ್ವಾಸವಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ನೌಕರರನ್ನು ಆಯಾ ನಿಗಮ ಮಂಡಳಿಗಳಲ್ಲಿಯೇ ವಿಲೀನಗೊಳಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನೌಕರರು ಸಹಕರಿಸುವಂತೆ ಮನವಿ ಮಾಡಿದರು.
ಜಯಪಾಲ್, ದಿನೇಶ್, ಮಂಜು ಸೇರಿದಂತೆ ಇನ್ನಿತರ ನೌಕರ ವರ್ಗದವರು, ಪ್ರಗತಿಪರ ಸಂಘಟನೆಗಳ ಮುಖಂಡರಾದ ರಾಜು, ಉಪಸ್ಥಿತರಿದ್ದರು.
No comments:
Post a Comment