Saturday, February 13, 2021

ಖಾಸಗಿ ಶಾಲೆಗಳನ್ನು ಮೀರಿಸಿದ ಹೊಸಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ

ಶಾಲೆಯನ್ನು ದತ್ತು ಪಡೆದ ಡಿಎಕ್ಸ್‌ಸಿ ಟೆಕ್ನಾಲಜಿ, ಬಾಲ್ ಉತ್ಸವ್ ಕಂಪನಿಗಳು

ಭದ್ರಾವತಿ ಹೊಸಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಡಿಎಕ್ಸ್‌ಸಿ ಟೆಕ್ನಾಲಜಿ ಹಾಗು ಬಾಲ್ ಉತ್ಸವ್ ಕಂಪನಿಯ ಪ್ರಮುಖರು ಉಪಸ್ಥಿತರಿರುವುದು.
* ಅನಂತಕುಮಾರ್
ಭದ್ರಾವತಿ: ಪೂರ್ಣ ಪ್ರಮಾಣದಲ್ಲಿ ನಗರ ಪ್ರದೇಶವೂ ಅಲ್ಲದ, ಗ್ರಾಮೀಣ ಪ್ರದೇಶವೂ ಅಲ್ಲದ ಹೊಸಸಿದ್ದಾಪುರ ಗ್ರಾಮದಲ್ಲಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಸರ್ಕಾರಿ ಪ್ರೌಢಶಾಲೆ ಇದೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ನಗರ ಪ್ರದೇಶದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಹಂತಕ್ಕೆ ಹೆಮ್ಮರವಾಗಿ ಬೆಳೆದು ನಿಂತಿದೆ.
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ೧೯೯೬ರಲ್ಲಿ ಗ್ರಾಮಸ್ಥರು ಹಾಗು ಶಿಕ್ಷಣ ಪ್ರೇಮಿಗಳ ಬಹುದಿನಗಳ ಬೇಡಿಕೆಯಂತೆ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.  ಅಂದಿನ ಶಿಕ್ಷಣ ಸಚಿವರಾಗಿದ್ದ ಎಚ್.ಜಿ ಗೋವಿಂದಗೌಡ ನೂತನ ಶಾಲೆಯನ್ನು ಉದ್ಘಾಟಿಸಿದರು. ಅಂದು ಶಾಲೆಯಲ್ಲಿ ಕೇವಲ ೪ ಕೊಠಡಿಗಳು, ೩೩ ವಿದ್ಯಾರ್ಥಿಗಳಿದ್ದು, ೩ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಈ ಶಾಲೆ ೧೧ ಕೊಠಡಿಗಳನ್ನು ಒಳಗೊಂಡು ೨೧೧ ವಿದ್ಯಾರ್ಥಿಗಳಿದ್ದು, ೧೩ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

  ಕಲ್ಪಿಸಲಾಗಿರುವ ಸೌಲಭ್ಯಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಿದ್ದಲ್ಲಿ ಕಂಪನಿಯಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಕಂಪನಿಗೆ ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯವಾಗಿದೆ.
                                   -ರಮೇಶ್ ಬಾಲಸುಂದರಂ, ಸಂಸ್ಥಾಪಕರು, ಬಾಲ್ ಉತ್ಸವ್ ಕಂಪನಿ.


ಭದ್ರಾವತಿ ಹೊಸಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕೊಠಡಿ.

     ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ:
  ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಇದುವರೆಗೂ ಈ ಶಾಲೆಯಲ್ಲಿ ಒಟ್ಟು ೨೦೨೩ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿದ್ದಾರೆ. ೨೦೧೭-೧೮ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿ. ಹರ್ಷಿತಾ ಎಂಬ ವಿದ್ಯಾರ್ಥಿನಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿಯೇ ಅತಿ ಹೆಚ್ಚು ಅಂಕಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರಳಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಸಹ ಶಿಕ್ಷಣದಲ್ಲಿ ಹಿಂದೆ ಉಳಿದಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಲಾಗಿತ್ತು.
ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೂ ಸಹ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಕಂಪ್ಯೂಟರ್ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಕ್ರೀಡಾ ಹಾಗು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಉಳಿದಂತೆ ಪ್ರಯೋಗಾಲಯ, ಆಟದ ಮೈದಾನ, ಕೈತೋಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.


ಭದ್ರಾವತಿ ಹೊಸಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಳವಡಿಸಲಾಗಿರುವ ಪ್ಯಾಡ್ ಬರ್ನಿಂಗ್ ಮೆಷಿನ್.

     ಇಂದಿಗೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ:
   ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ ದೂರದಲ್ಲಿರುವ ಹೊಸ ಸಿದ್ದಾಪುರ ಗ್ರಾಮಕ್ಕೆ ಇಂದಿಗೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ. ಈ ಮಾರ್ಗದಲ್ಲಿ ಕೇವಲ ಒಂದೇ ಒಂದು ಖಾಸಗಿ ಬಸ್ ಸಂಚರಿಸುತ್ತಿದೆ. ಇದರಿಂದಾಗಿ ಈ ವ್ಯಾಪ್ತಿಯ ರಾಮನಕೊಪ್ಪ, ಹಾಗಲಮನೆ, ಸಿರಿಯೂರು, ಸಂಕ್ಲಿಪುರ, ಕಲ್ಲಹಳ್ಳಿ, ಸಿದ್ದಾಪುರ ತಾಂಡ, ವೀರಾಪುರ, ನಂಜಾಪುರ, ಹೊಸಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಮಕ್ಕಳನ್ನು ದೂರದ ಶಾಲೆಗಳಿಗೆ ಅದರಲ್ಲೂ ಹೆಣ್ಣುಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿದ್ದರು. ಈ ಶಾಲೆ ಆರಂಭಗೊಂಡ ನಂತರ ಈ ಸಮಸ್ಯೆಗೆ ಪರಿಹಾರ ಲಭಿಸಿದೆ. ಬಹುತೇಕ ಎಲ್ಲಾ ಗ್ರಾಮಗಳ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.  ಮತ್ತೊಂದು ವಿಶೇಷವೆಂದರೆ ನಗರ ಪ್ರದೇಶದಿಂದಲೂ ಈ ಶಾಲೆಗೆ ಮಕ್ಕಳು ಬರುತ್ತಿದ್ದಾರೆ.

ಈ ಶಾಲೆಯಲ್ಲಿ ೨೦೦೬ರಿಂದ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅದರಲ್ಲೂ ಹೆಚ್ಚುವರಿ ತರಗತಿಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಗೆ ಸರಿಯಾಗಿ ಹಾಜರಾಗುತ್ತಿದ್ದಾರೆ. ೨೦೧೪ರಿಂದ ಆರ್. ಬಸವರಾಜ್‌ರವರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಾಲಾಭಿವೃದ್ಧಿ ಸಮಿತಿಯೊಂದಿಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.'
                        - ಮುರಳಿಧರ, ಗಣಿತ ಶಿಕ್ಷಕರು, ಹೊಸಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ
   

ಭದ್ರಾವತಿ ಹೊಸಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆಟದ ಕ್ರೀಡಾಂಗಣ.
          ಶಾಲಾಭಿವೃದ್ಧಿ ಸಮಿತಿಗೆ ಎಲ್ಲೆಡೆಯಿಂದ ನೆರವು:
    ಕೆಲವು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರದ ಅನುದಾನದಲ್ಲಿ ಕೈಗೊಂಡರೇ, ಉಳಿದಂತೆ ಬಹುತೇಕ ಕಾರ್ಯಗಳನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಕೈಗೊಳ್ಳಲಾಗುತ್ತಿದೆ. ಸಮಿತಿಗೆ  ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗು ಹಳೇ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ನೆರವಿನ ಹಸ್ತ ಚಾಚುತ್ತಿದ್ದಾರೆ.  ವಿಐಎಸ್‌ಎಲ್, ರೋಟರಿ ಕ್ಲಬ್, ಕಾರ್ಪೋರೇಷನ್ ಬ್ಯಾಂಕ್ ಮತ್ತು ಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿ ಸಾಮಾಜಿಕ ಯೋಜನೆಯಡಿ ವಿಶೇಷವಾಗಿ ಈ ಶಾಲೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ.
     ೩ ವರ್ಷಗಳ ಅವಧಿಗೆ ಶಾಲೆ ದತ್ತು:
   ಈ ಶಾಲೆಯ ಪ್ರಗತಿಯನ್ನು ಗಮನಿಸಿರುವ ಡಿಎಕ್ಸ್‌ಸಿ ಟೆಕ್ನಾಲಜಿ ಹಾಗು ಬಾಲ್ ಉತ್ಸವ್ ಕಂಪನಿಗಳು ೨೦೧೯-೨೦ನೇ ಶೈಕ್ಷಣಿಕ ಸಾಲಿನಲ್ಲಿ ಸಿಎಸ್‌ಆರ್ ಯೋಜನೆಯಡಿ ೩ ವರ್ಷಗಳ ಅವಧಿಗೆ ಶಾಲೆಯನ್ನು ದತ್ತು ಪಡೆದಿವೆ.
   ಶಾಲೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು, ಶಿಕ್ಷಕರ ಬೋಧನಾ ಸಾಮರ್ಥ್ಯ ಹೆಚ್ಚಿಸುವುದು, ಶುದ್ಧ ಕುಡಿಯುವ ನೀರು ಹಾಗು ನೈರ್ಮಲ್ಯೀಕರಣ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವಿಕೆ ಸೇರಿದಂತೆ ಇನ್ನಿತರ ಉದ್ದೇಶಗಳನ್ನು ಕಂಪನಿಗಳು ಹೊಂದಿವೆ.
   ಶಾಲೆಯಲ್ಲಿ ದಾಖಲಾತಿ ಪ್ರಮಾಣ, ವಿದ್ಯಾರ್ಥಿಗಳ ಬೌದ್ಧಿಕ ಗುಣಮಟ್ಟ ಹೆಚ್ಚಿಸುವುದು, ಗುಣಮಟ್ಟದ ಶಿಕ್ಷಣ ನೀಡುವುದು, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಾಗರೀಕ ಮೌಲ್ಯಗಳನ್ನು ಬೆಳೆಸುವುದು ಹಾಗು ಶಾಲಾಭಿವೃದ್ಧಿಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಕಂಪನಿಗಳು ಹೊಂದಿವೆ.
  ಡಿಎಕ್ಸ್‌ಸಿ ಟೆಕ್ನಾಲಜಿ ಹಾಗು ಬಾಲ್ ಉತ್ಸವ್ ಕಂಪನಿಗಳಿಂದ ಶಾಲೆಯಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳು:
    ಶುದ್ದ ಕುಡಿಯುವ ನೀರಿನ ಘಟಕ, ೨ ಸ್ಮಾರ್ಟ್ ಟಿ.ವಿ, ಪ್ಯಾಡ್ ಬರ್ನಿಂಗ್ ಮಸಿನ್, ಪ್ರಥಮ ಚಿಕಿತ್ಸಾ ಕಿಟ್, ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಪ್ರತಿ ವಿದ್ಯಾರ್ಥಿಗೆ ೨೦ ನೋಟ್ ಬುಕ್, ಶಾಲಾ ಬ್ಯಾಗ್, ನೀರಿನ ಬಾಟಲ್, ಎರಡು ಜೊತೆ ಶೂ, ಸಾಕ್ಸ್, ಪೆನ್ಸಿಲ್ ಬಾಕ್ಸ್, ಪರೀಕ್ಷಾ ಪ್ಯಾಡ್, ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್, ಗುಣಮಟ್ಟದ ಪೇಂಟಿಂಗ್, ಕಂಪ್ಯೂಟರ್ ಶಿಕ್ಷಕಿ ಹಾಗು ಸ್ಕ್ಯಾವೆಂಜರ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಉನ್ನತ ವ್ಯಾಸಂಗ ಕಲ್ಪಿಸಿಕೊಡುವುದು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಈ ಎರಡು ಕಂಪನಿಗಳ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿದೆ.
    ಮುಂದಿನ ದಿನಗಳಲ್ಲಿ ಈ ಶಾಲೆ ತಾಲೂಕಿನಲ್ಲಿಯೇ ಸರ್ಕಾರಿ ಶಾಲೆಗಳ ಪೈಕಿ ಮಾದರಿ ಶಾಲೆಯಾಗಿ ಹೊರಹೊಮ್ಮುವ ಮೂಲಕ ಭವಿಷ್ಯದ ವಿದ್ಯಾರ್ಥಿಗಳ ಆಶಾಕಿರಣವಾಗಲಿದೆ ಎಂದರೆ ತಪ್ಪಾಗಲಾರದು.  

1 comment: