ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ಮುಖಂಡರು ಮಾತನಾಡಿದರು.
ಭದ್ರಾವತಿ, ಮಾ. ೮: ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ನಡೆದಿರುವ ಗಲಾಟೆ ಪ್ರಕರಣದ ನಂತರ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಪುನಃ ಶಾಂತಿ ನೆಲೆನಿಲ್ಲುವ ನಿಟ್ಟಿನಲ್ಲಿ ಎಲ್ಲಾ ಪಕ್ಷದವರು, ಎಲ್ಲಾ ಸಮುದಾಯವರು ಜೊತೆ ಸೇರಿ ಮಾತುಕತೆಗೆ ಮುಂದಾಗಬೇಕೆಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ ಆಗ್ರಹಿಸಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಲಾಟೆ ಪ್ರಕರಣವನ್ನು ವೀರಶೈವ ಸಮಾಜ ಖಂಡಿಸುತ್ತದೆ. ಗಲಾಟೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಯಾವುದೇ ಕಾರಣಕ್ಕೂ ತಪ್ಪು ಮಾಡದಿರುವವರಿಗೆ ಶಿಕ್ಷೆಯಾಗಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ರವರು ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಇರಲಿಲ್ಲ. ಆದರೂ ಸಹ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
ಕ್ಷೇತ್ರದ ಶಾಸಕರು ನಮ್ಮ ಸಮುದಾಯದವರೇ ಆಗಿದ್ದರೂ ಸಹ ಸದಾ ಕಾಲ ಎಲ್ಲಾ ಸಮುದಾಯದವರೊಂದಿಗೆ ಗುರುತಿಸಿಕೊಂಡಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಇವರ ಮೇಲೆ ಪ್ರಕರಣ ದಾಖಸಿರುವುದು ಸಮಾಜದವರಿಗೆ ನೋವುಂಟು ಮಾಡಿದೆ. ಇವರ ಮೇಲೆ ದೂರು ಕೊಟ್ಟವರು ತಕ್ಷಣ ದೂರು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರಸ್ತುತ ಕ್ಷೇತ್ರದಲ್ಲಿ ಎರಡು ಕಾರ್ಖಾನೆಗಳು ಮುಚ್ಚಿವೆ. ಉದ್ಯೋಗವಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ನಡುವೆ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಘಟನೆ ನಡೆದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆ ನಿಲ್ಲಬೇಕೆಂದು ಸಮಾಜ ಬಯಸುತ್ತದೆ ಎಂದರು.
ಬಿ.ಎಸ್ ಯಡಿಯೂರಪ್ಪ, ಬಿ.ವೈರಾಘವೇಂದ್ರ ನಡೆಗೆ ಆಕ್ರೋಶ:
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರು ಹಾಗು ಸಮುದಾಯದವರನ್ನು ಬಳಸಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ನಡೆಗೆ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎರೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎರೇಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಾಸಕರ ಮೂಲಕ ಸಮುದಾಯದವರ ಮತಗಳನ್ನು ಸೆಳೆಯಲಾಗುತ್ತಿದೆ. ಇದೀಗ ಅವರ ಏಳಿಗೆಯನ್ನು ಸಹಿಸದೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನೆಲೆ ಕಲ್ಪಿಸಿಕೊಳ್ಳಲು ಅವರನ್ನು ರಾಜಕೀಯ ಮುಗಿಸಲು ಹುನ್ನಾರ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ವೀರಶೈವ ಸಮಾಜ ತಟಸ್ಥವಾಗಿರುವುದು ಸರಿಯಲ್ಲ. ಇದರ ವಿರುದ್ಧ ಧ್ವನಿ ಎತ್ತಬೇಕೆಂದು ಸಮಾಜದ ಅಧ್ಯಕ್ಷರಿಗೆ ಆಗ್ರಹಿಸಿದರು.
ಇವರ ಮಾತಿನಿಂದ ವಿಚಲಿತಗೊಂಡ ಅಧ್ಯಕ್ಷ ವೀರಭದ್ರಪ್ಪ, ಒಂದು ಕ್ಷಣ ಚಂದ್ರಶೇಖರ್ ವಿರುದ್ಧ ಹರಿಹಾಯ್ದರು. ಸಮಾಜ ಯಾರ ವಿರುದ್ಧ ಸಹ ಇಲ್ಲ. ನಮ್ಮ ಉದ್ದೇಶ ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆನಿಲ್ಲಬೇಕೆಂಬುದಾಗಿದೆ ಅಷ್ಟೆ ಹೊರತು ಬೇರೆ ಯಾವುದೇ ವಿಚಾರಗಳಿಲ್ಲ ಎಂದು ತಿಳಿಸಿ ಗೋಷ್ಠಿ ಮುಕ್ತಾಯಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂಜೀವಕುಮಾರ್, ಷಣ್ಮುಖಪ್ಪ, ಶಾಂತಕುಮಾರ್, ಬಸವಂತಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment