ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜ.
* ಅನಂತಕುಮಾರ್
ಭದ್ರಾವತಿ, ಮಾ. ೭: ಸಮಾಜದಲ್ಲಿ ಸಂಘಟನೆಗಳು ಬಹುಬೇಗನೆ ಹುಟ್ಟಿಕೊಳ್ಳುತ್ತವೆ. ಆದರೆ ಎಲ್ಲಾ ಸಂಘಟನೆಗಳು ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ. ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಸಂಘಟನೆ ಕಟ್ಟಿದವರಲ್ಲಿ ಕ್ರಿಯಾಶೀಲತೆ, ಸಂಘಟನಾತ್ಮಕ ಚತುರತೆ, ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನಸ್ಥಿತಿ ಎಲ್ಲವೂ ಬಹಳ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಮಹಿಳೆಯರು ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಎಂದರೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಸುಮಾರು ೫ ದಶಕಗಳಿಗೂ ಹೆಚ್ಚು ಕಾಲದಿಂದ ಮುನ್ನಡೆಯುತ್ತಿರುವ ಹಳೇನಗರದ ಮಹಿಳಾ ಸೇವಾ ಸಮಾಜ ಇದೀಗ ನಗರದ ಇತರೆ ಮಹಿಳಾ ಸಂಘಟನೆಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.
ಹೌದು..! ಸುಮಾರು ೫ ದಶಕಗಳ ಹಿಂದೆ ಕೆಲವೇ ಕೆಲವು ಮಹಿಳೆಯರು ಒಂದೆಡೆ ಸೇರಿ ಹುಟ್ಟುಹಾಕಿದ ಮಹಿಳಾ ಸಮಾಜ ಇಂದು ಬೃಹದಾಗಿ ಬೆಳೆದಿದೆ. ಅದರಲ್ಲೂ ನಗರದಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡ ಹೊಂದಿರುವ ಏಕೈಕ ಮಹಿಳಾ ಸಮಾಜ ಇದಾಗಿದೆ. ಯಾವುದೇ ಆದಾಯದ ಮೂಲವಿಲ್ಲದಿದ್ದರೂ ಸಹ ಇದುವರೆಗೂ ಕ್ರಿಯಾಶೀಲವಾಗಿ ಮುನ್ನಡೆಸಿಕೊಂಡು ಬಂದಿರುವುದೇ ಈ ಮಹಿಳಾ ಸಮಾಜದ ವಿಶೇಷತೆಯಾಗಿದೆ.
ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸ್ವಸಹಾಯ ಮಹಿಳಾ ಸಂಘಟನೆಗಳಿಗೂ ಈ ಮಹಿಳಾ ಸಂಘಟನೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಸ್ವಸಹಾಯ ಸಂಘಟನೆಗಳಲ್ಲಿ ಆರ್ಥಿಕ ಲಾಭದ ಉದ್ದೇಶಕ್ಕಾಗಿ ಮಹಿಳೆಯರು ಒಂದೆಡೆ ಸೇರಿಕೊಳ್ಳುತ್ತಾರೆ. ಆದರೂ ಪೂರ್ಣಪ್ರಮಾನದಲ್ಲಿ ಮಹಿಳೆಯರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಆದರೆ ಈ ಘಟನೆಯಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳಿಲ್ಲದಿದ್ದರೂ ಸ್ವಯಂ ಪ್ರೇರಣೆಯಿಂದ ಮಹಿಳೆಯರು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು.
ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು, ರಕ್ತದಾನ, ನೇತ್ರದಾನ ಶಿಬಿರ ಸೇರಿದಂತೆ ಇನ್ನಿತರ ಆರೋಗ್ಯ ಶಿಬಿರಗಳು, ಸ್ವಚ್ಛತೆ, ಶ್ರಮದಾನ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಲಯನ್ಸ್, ರೋಟರಿ ಕ್ಲಬ್ ಸೇರಿದಂತೆ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಕೈಗೊಳ್ಳುವ ಸೇವಾ ಕಾರ್ಯಗಳಲ್ಲೂ ಸಹಭಾಗಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಈ ಸಂಘಟನೆಯಲ್ಲಿ ಸುಮಾರು ೮೦ ಸದಸ್ಯರಿದ್ದು, ಬಹುತೇಕ ಸದಸ್ಯರು ಗೃಹಿಣಿಯರಾಗಿದ್ದಾರೆ. ವೈದ್ಯರಾಗಿ, ಶಿಕ್ಷಕಿಯರಾಗಿ, ನ್ಯಾಯವಾದಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಸಹ ಸದಸ್ಯರಾಗಿದ್ದಾರೆ. ತಮ್ಮ ದಿನನಿತ್ಯದ ಬದುಕಿನ ಒತ್ತಡದ ನಡುವೆಯೂ ಒಂದಿಷ್ಟು ಸಮಯ ಈ ಸಂಘಟನೆಗಾಗಿ ಮೀಸಲಿಟ್ಟಿದ್ದಾರೆ. ಈ ಸಂಘಟನೆಯ ಬಹುತೇಕ ಸದಸ್ಯರು ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಂಡಿರುವ ಕಾರಣ ಹಾಗು ಪಾರದರ್ಶಕತೆ ಕಾಯ್ದುಕೊಂಡಿರುವ ಹಿನ್ನಲೆಯಲ್ಲಿ ಇದುವರೆಗೂ ಸಂಘಟನೆ ಮುನ್ನಡೆದುಕೊಂಡು ಬರಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.
'ಈ ಮಹಿಳಾ ಸೇವಾ ಸಮಾಜವನ್ನು ಇದುವರೆಗೂ ಮುನ್ನಡೆಸಿಕೊಂಡು ಬಂದಿರುವುದೇ ಹೆಚ್ಚು. ಸುಮಾರು ೨೦ಕ್ಕೂ ಅಧಿಕ ವರ್ಷದಿಂದ ಸದಸ್ಯೆಯಾಗಿದ್ದು, ಪ್ರಸ್ತುತ ಸಮಾಜದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸುಮಾರು ೧೫ ದಿನಗಳ ಹಿಂದೆ ಸುಮಾರು ೨೦ ಲಕ್ಷ ರು. ನಗರಸಭೆ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನಡೆದಿದ್ದು, ಮೇಲ್ಭಾಗದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಸುಮಾರು ೩೦ ಲಕ್ಷ ರು. ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಸಹ ಆರಂಭಗೊಳ್ಳುತ್ತಿದೆ. ಈ ಸೇವಾ ಸಮಾಜದಲ್ಲಿ ಹಲವು ಒತ್ತಡಗಳ ನಡುವೆಯೂ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.'
- ಹೇಮಾವತಿ ವಿಶ್ವನಾಥ್, ಅಧ್ಯಕ್ಷರು, ಮಹಿಳಾ ಸೇವಾ ಸಮಾಜ
ಪ್ರಸ್ತುತ ಗೌರವಾಧ್ಯಕ್ಷರಾಗಿ ವಸುಧ ಮುಕುಂದ್, ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್, ಉಪಾಧ್ಯಕ್ಷೆಯಾಗಿ ಕಮಲಕುಮಾರಿ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಗಂಗರಾಜ್, ಸಹಕಾರ್ಯದರ್ಶಿಯಾಗಿ ಇಂದಿರಾ ರಮೇಶ್, ಖಜಾಂಚಿ ಜಯಂತಿಶೇಟ್ ಹಾಗು ಸದಸ್ಯರಾಗಿ ಅನ್ನಪೂರ್ಣ ಸತೀಶ್, ಚಂದ್ರಕಲಾ ವರದರಾಜ್, ಶಕುಂತಲ ರವಿಕುಮಾರ್, ಭಾಗ್ಯ ನಿಜಗುಣ, ಶಾರದ ಶ್ರೀನಿವಾಸ್, ಕಮಲರಾಯ್ಕರ್ ಹಾಗು ಗೌರವ ಸಲಹೆಗಾರರಾಗಿ ಬಿ.ಎಸ್ ರೂಪರಾವ್ ಮತ್ತು ಯಶೋಧ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
No comments:
Post a Comment