ಬಿ.ಕೆ ಮೋಹನ್ ೨೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ
* ಅನಂತಕುಮಾರ್
ಭದ್ರಾವತಿ, ಏ. ೨೧: ಈ ಬಾರಿ ನಗರಸಭೆ ಚುನಾವಣೆ ಹಲವು ವಿಶೇಷತೆಯಿಂದ ಕೂಡಿದ್ದು, ಅಪ್ಪ-ಮಗ ಸ್ಪರ್ಧೆ ಒಂದೆಡೆಯಾದರೆ, ಅಲ್ಪ ಸಂಖ್ಯಾತರು, ಮಹಿಳೆಯರಿಗೆ ಹೆಚ್ಚಿನ ಅವಕಾಶ, ನಾನಾ ತಂತ್ರಗಾರಿಕೆ ಮೂಲಕ ಹಾಲಿ ಸದಸ್ಯರಿಂದ ಪುನಃ ಪೈಪೋಟಿ ಹೀಗೆ ಹಲವು ವಿಶೇಷತೆಗಳು ಕಂಡು ಬರುತ್ತಿವೆ.
ಈ ಬಾರಿ ನಗರಸಭೆ ೩೫ ವಾರ್ಡ್‌ಗಳ ಚುನಾವಣಾ ಕಣದಲ್ಲಿ ಒಟ್ಟು ೧೭೩ ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ಪಕ್ಷದ ೨೯ನೇ ವಾರ್ಡಿನ ಮಹಿಳಾ ಅಭ್ಯರ್ಥಿ ಕಳೆದ ೩ ದಿನಗಳ ಹಿಂದೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಈ ನಡುವೆ ೧೭ನೇ ವಾರ್ಡಿನ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಡಿ.ಎನ್ ರವಿಕುಮಾರ್ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
ಅಪ್ಪ-ಮಕ್ಕಳ ಸ್ಪರ್ಧೆ :
ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ವಾರ್ಡ್ ನಂ.೨೨ರಿಂದ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ನಲ್ಲಿ ಈ ಹಿಂದೆ ೨ ಬಾರಿ ನಗರಸಭೆ ಸದಸ್ಯರಾಗಿದ್ದ ವೆಂಕಟಯ್ಯ ಈ ಬಾರಿ ಬಿ.ಕೆ ಮೋಹನ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ನಗರಸಭೆ ೭ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಈ ಹಿಂದೆ ಈ ವಾರ್ಡಿನ ಸದಸ್ಯರಾಗಿದ್ದ ಟಿಪ್ಪು ಸುಲ್ತಾನ್ ಮಂಜುನಾಥ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬಿಜೆಪಿ ಪಕ್ಷದ ಹಿರಿಯ ಮುಖಂಡ ವಿ. ಕದಿರೇಶ್ ೭ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ೩ ಬಾರಿ ಪುರಸಭಾ ಸದಸ್ಯರಾಗಿ, ೩ ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಂದು ಬಾರಿ ನಗರಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ೧೬ನೇ ವಾರ್ಡಿನ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಗೆಲುವಿಗಾಗಿ ಪೈಪೋಟಿಗೆ ಮುಂದಾಗಿದ್ದಾರೆ. ಸಂಘ ಪರಿವಾರದ ಮೂಲಕ ರಾಜಕೀಯ ಪ್ರವೇಶಿರುವ ಕದಿರೇಶ್ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷರಾಗಿ, ಸೂಡಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ಈ ಬಾರಿ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಪತ್ನಿ ರೇಣುಕಾರನ್ನು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ೧೫ನೇ ವಾರ್ಡ್‌ನಲ್ಲಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು.
ಜೆಡಿಎಸ್ ಮತ್ತು ಎಎಪಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ :
೩೫ ವಾರ್ಡ್‌ಗಳ ಪೈಕಿ ಶೇ.೫೦ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಮತ್ತು ಎಎಪಿ ಪಕ್ಷಗಳು ಬಿಟ್ಟುಕೊಟ್ಟಿವೆ. ಜೆಡಿಎಸ್-೧೯, ಬಿಜೆಪಿ-೧೮, ಕಾಂಗ್ರೆಸ್-೧೭(ಓರ್ವ ಮಹಿಳಾ ಅಭ್ಯರ್ಥಿ ನಿಧನ) ಹಾಗು ಎಎಪಿ-೪(ಒಟ್ಟು ೭ ಸ್ಥಾನಗಳಲ್ಲಿ ಸ್ಪರ್ಧೆ) ಸ್ಥಾನಗಳಲ್ಲಿ ಮಹಿಳೆಯರು ಸ್ಪರ್ಧಿಸಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಮೀಸಲಾತಿಕ್ಕಿಂತ ಹೆಚ್ಚಿನ ಸ್ಥಾನಗಳು ಮಹಿಳೆಯರಿಗೆ ಲಭಿಸಿವೆ.
ಗಮನ ಸೆಳೆಯುತ್ತಿರುವ ಎಎಪಿ:
ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಾರ್ಟಿ ಒಟ್ಟು ೭ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪೈಕಿ ೪ ಜನ ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಮೊದಲ ಬಾರಿಗೆ ಖಾತೆ ತೆರೆಯುವ ನಿಟ್ಟಿನಲ್ಲಿ ಪಕ್ಷ ಹೆಚ್ಚಿನ ಗಮನ ಹರಿಸುತ್ತಿದ್ದು, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಹಾಗು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಭರದಿಂದ ಕೈಗೊಳ್ಳಲಾಗುತ್ತಿದೆ.
ಹಾಲಿ ಸದಸ್ಯರಿಂದ ನಾನಾ ರೀತಿಯ ತಂತ್ರಗಾರಿಕೆ:
ಕೆಲವು ವಾರ್ಡ್‌ಗಳಲ್ಲಿ ಹಿಂದಿನ ಮೀಸಲಾತಿ ಮರುಕಳುಹಿಸಿರುವ ಹಿನ್ನಲೆಯಲ್ಲಿ ಹಾಲಿ ಸದಸ್ಯರು ಪುನಃ ಸ್ಪರ್ಧಿಸಿದ್ದು, ಇನ್ನೂ ಕೆಲವು ಹಾಲಿ ಸದಸ್ಯರು ತಮಗೆ ಅನ್ವಯವಾಗುವ ಮೀಸಲಾತಿ ಇರುವ ವಾರ್ಡ್‌ಗಳಿಗೆ ವಲಸೆ ಬಂದು ಸ್ಪರ್ಧಿಸಿದ್ದಾರೆ. ಮತ್ತೆ ಕೆಲವು ಹಾಲಿ ಸದಸ್ಯರು ಮಹಿಳಾ ಮೀಸಲಾತಿ ನಿಗದಿಯಾದ ವಾರ್ಡ್‌ಗಳಲ್ಲಿ ತಮ್ಮ ತಮ್ಮ ಪತ್ನಿಯರು ಹಾಗು ಕುಟುಂಬ ವರ್ಗದವರನ್ನು ಕಣಕ್ಕಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹಾಲಿ ಸದಸ್ಯರಾದ ಎಂ. ಮಣಿ ೧೧ನೇ ವಾರ್ಡ್, ಟಿಪ್ಪು ಸುಲ್ತಾನ್ ೧೭ನೇ ವಾರ್ಡ್, ಎಸ್. ಲಕ್ಷ್ಮೀದೇವಿ ೨೦ನೇ ವಾರ್ಡ್, ಆಂಜನಪ್ಪ ೨೫ನೇ ವಾರ್ಡ್, ಜೆಡಿಎಸ್ ಪಕ್ಷದಿಂದ ಹಾಲಿ ಸದಸ್ಯರಾದ ಆರ್. ಕರುಣಾಮೂರ್ತಿ, ವಿಶಾಲಾಕ್ಷಿ ಮತ್ತು ರವಿಕುಮಾರ್ ಹಾಗು ಬಿಜೆಪಿ ಪಕ್ಷದಿಂದ ಹಾಲಿ ಸದಸ್ಯರಾದ ವಿ. ಕದಿರೇಶ್ ಮತ್ತು ಜಿ. ಆನಂದಕುಮಾರ್ ಸ್ಪರ್ಧಿಸಿದ್ದಾರೆ.
ಸ್ಪರ್ಧೆಗೆ ಅವಕಾಶ ಸಿಗದ ಹಾಲಿ ಸದಸ್ಯರಾದ ಮುರ್ತುಜಾ ಖಾನ್ ತಮ್ಮ ಪತ್ನಿ ತಬಸುಮ್ ಸುಲ್ತಾನ್, ಶಿವರಾಜ್ ತಮ್ಮ ಪತ್ನಿ ಎಂ. ರೇಣುಕಾ, ಬದರಿನಾರಾಯಣ ತಮ್ಮ ಪತ್ನಿ ಪ್ರೇಮಾ, ಗುಣಶೇಖರ್ ತಮ್ಮ ಪತ್ನಿ ರೂಪಾವತಿ, ಅನಿಲ್‌ಕುಮಾರ್ ಆರ್. ನಾಗರತ್ನ, ರೇಣುಕಾ ತಮ್ಮ ಪತಿ ಸುದೀಪ್‌ಕುಮಾರನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯಲ್ಲಿ ಬಹುತೇಕ ಹೊಸಬರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಹಾಲಿ ಮತ್ತು ಮಾಜಿ ಸದಸ್ಯರಿಗೆ ಅವಕಾಶ ನೀಡಲಾಗಿದೆ.
No comments:
Post a Comment