Saturday, April 3, 2021

ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಯು ಅಭ್ಯರ್ಥಿಗಳು ಸ್ಪರ್ಧೆ

ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬೇಹಳ್ಳಿ ಡಿ. ನಾಗರಾಜು

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬೇಹಳ್ಳಿ ಡಿ. ನಾಗರಾಜು ಮಾತನಾಡಿದರು.

  ಭದ್ರಾವತಿ, ಏ. ೩: ಮುಂಬರುವ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ವತಿಯಿಂದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಸಲಾಗಿದ್ದು, ಈ ಹಿನ್ನಲೆಯಲ್ಲಿ ಇಲ್ಲಿನ ನಗರಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬೇಹಳ್ಳಿ ಡಿ. ನಾಗರಾಜು ತಿಳಿಸಿದರು.
    ಅವರು ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಳಮಟ್ಟದಿಂದ ಪಕ್ಷವನ್ನು ಪುನರ್ ಸಂಘಟಿಸುವ ಜೊತೆಗೆ ಮುಂಬರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆರ್‌ಪಿಸಿ ಸಿಂಗ್, ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹಾಗು ರಾಜ್ಯದ ವರಿಷ್ಠರು ತೀರ್ಮಾನ ಕೈಗೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ನಗರಸಭೆ ಎಲ್ಲಾ ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆಂದರು.
   ಸಮಾಜ ಸೇವೆಯಲ್ಲಿ ಆಸಕ್ತಿ, ಬಡವರ ಬಗ್ಗೆ ಕಾಳಜಿ, ಪ್ರಾಮಾಣಿಕತನ ಮೈಗೂಡಿಸಿಕೊಂಡಿರುವ ಹಾಗು ಪಕ್ಷದ ಸಿದ್ದಾಂತಗಳಿಗೆ ಬದ್ಧರಾಗುವವರಿಗೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಅದರಲ್ಲೂ ಶೇ.೬೫ರಷ್ಟು ಮಹಿಳೆಯರಿಗೆ ಹಾಗು ಯುವ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.
    ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧಹೊಂದಿದ ನಂತರ ನಡೆಯುತ್ತಿರುವ ಮೊದಲ ನಗರಸಭೆ ಚುನಾವಣೆ ಇದಾಗಿದೆ. ಮತದಾರರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಚುನಾವಣೆಗೆ ಹೆಚ್ಚಿನ ಗಮನ ಹರಿಸುತ್ತಿವೆ ಎಂದರು.
   ಸರ್ಕಾರಿ ಕಛೇರಿಗಳಲ್ಲಿ ಲಂಚ ಸ್ವೀಕಾರಕ್ಕೆ ಕಡಿವಾಣ, ಭ್ರಷ್ಟಾಚಾರ ನಿರ್ಮೂಲನೆ, ನಗರದ ಸ್ವಚ್ಛತೆಗೆ ಮೊದಲ ಆದ್ಯತೆ, ಬಡ ಕಾರ್ಮಿಕರು, ಮಹಿಳೆಯರಿಗೆ ರಕ್ಷಣೆ, ರಸ್ತೆ, ಚರಂಡಿ, ಕುಡಿಯುವ ನೀರು, ವಸತಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವುದು, ಮಟ್ಕಾ, ಇಸ್ಪೀಟ್, ಮೀಟರ್ ಬಡ್ಡಿ ದಂಧೆ ಸೇರಿದಂತೆ ಕಾನೂನು ಬಾಹಿರ ಕೃತ್ಯಗಳನ್ನು ನಿರ್ಮೂಲನೆ ಮಾಡುವುದು, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ನೆಸುವುದು ಸೇರಿದಂತೆ ಹಲವು ಆಶಯಗಳನ್ನೊಳಗೊಂಡಂತೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಾಗುವುದು ಎಂದರು.
  ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಲ್ಲೂರು ಉಸ್ಮಾನ್ ಷರೀಫ್, ರಾಜ್ಯ ಕಾರ್ಯದರ್ಶಿ ಸಂಘಟನೆ ಎನ್.ಕೆ ಕಾರ್ತಿಕ್, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ,  ಜಿಲ್ಲಾ ಸಂಚಾಲಕ ದೇವರಾಜ್ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment