Tuesday, June 15, 2021

ಸಂಕಷ್ಟದ ಸಮಯದಲ್ಲಿ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ : ಎಸ್. ರುದ್ರೇಗೌಡ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರಿಗೆ, ದಿನಪತ್ರಿಕೆ ವಿತರಕರು ಹಾಗು ಏಜೆಂಟರ್‌ಗಳಿಗೆ ದಿನಸಿ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೫: ಕಷ್ಟಕಾಲದಲ್ಲಿ ಸ್ಪಂದಿಸುವ ಮನೋಭಾವನೆಯೊಂದಿಗೆ ಕೈಗೊಳ್ಳುವ ಸೇವಾ ಕಾರ್ಯಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಕೊರೋನಾ ಪರಿಣಾಮದಿಂದಾಗಿ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಕೈಗೊಳ್ಳುತ್ತಿರುವ ಮಹಾತ್ಕಾರ್ಯಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
     ಅವರು ಹಳೇನಗರದ ಪತ್ರಿಕಾಭವನದಲ್ಲಿ ಸೇವಾ ಭಾರತಿ ಹಾಗು ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರಿಗೆ, ದಿನಪತ್ರಿಕೆ ವಿತರಕರು ಹಾಗು ಏಜೆಂಟರ್‌ಗಳಿಗೆ ದಿನಸಿ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಸಂಸದ ಬಿ.ವೈ ರಾಘವೇಂದ್ರ ಕುಟುಂಬ ಸದಸ್ಯರು ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರೇರಣಾ ಎಜ್ಯುಕೇಷನ್ ಟ್ರಸ್ಟ್ ಹಾಗು ಸೇವಾ ಭಾರತಿ ಸಂಸ್ಥೆಗಳು ಹಲವಾರು ವರ್ಷಗಳಿಂದ ಅನೇಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೆ ಇದೀಗ ಕೈಗೊಳ್ಳುತ್ತಿರುವ ದಿನಸಿ ಸಾಮಗ್ರಿಗಳ ವಿತರಣೆ ಬಹುದೊಡ್ಡ ಕಾರ್ಯವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಸುಮಾರು ೩೫ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಅದರಲ್ಲೂ ಗುಣಮಟ್ಟದ ದಿನಸಿ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ವಿಶೇಷವಾಗಿದೆ. ಸಂಕಷ್ಟದ ಸಮಯದಲ್ಲೂ ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶ ಈ ಮೂಲಕ ತಿಳಿಸಲಾಗುತ್ತಿದೆ. ಇದು ಇತರರಿಗೆ ಸ್ಪೂರ್ತಿದಾಯಕವಾಗಬೇಕು. ಇದೆ ರೀತಿ ಹಲವಾರು ಸಂಘ-ಸಂಸ್ಥೆಗಳು ಎಲೆಮರೆ ಕಾಯಿಯಂತೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ರೀತಿಯ ಸೇವಾ ಸಂಸ್ಥೆಗಳನ್ನು ಗುರುತಿಸಿ ಆ ಸಂಸ್ಥೆಗಳ ಸೇವಾ ಕಾರ್ಯಗಳಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್, ನಗರಸಭಾ ಸದಸ್ಯೆ ಶಶಿಕಲಾ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಮುಖಂಡರಾದ ಬಿ.ಎಸ್ ನಾರಾಯಣಪ್ಪ, ಅವಿನಾಶ್, ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment