Thursday, September 2, 2021

ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆ

ಒಟ್ಟು ೩೪೨೩ ಮತದಾರರು, ೪ ಮತಗಟ್ಟೆಗಳು, ೩ ಅಭ್ಯರ್ಥಿಗಳು


ಭದ್ರಾವತಿ, ಸೆ. ೨: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯ ಮತದಾನ ಸೆ.೩ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ ನಡೆಯಲಿದ್ದು, ಚುನಾವಣಾ ಆಯೋಗ ಈಗಾಗಲೇ ಮತದಾನಕ್ಕೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದೆ.
    ೧೭೦೭ ಪುರುಷ ಹಾಗು ೧೭೧೬ ಮಹಿಳಾ ಮತದಾರರು ಸೇರಿ ಒಟ್ಟು ೩೪೨೩ ಮತದಾರನ್ನು ಒಳಗೊಂಡಿದೆ. ಜಯಶ್ರೀ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಸರ್ಕಾರಿ ಶಾಲೆ, ನ್ಯೂಟೌನ್ ನಗರಸಭೆ ಶಾಖಾ ಕಛೇರಿ ಹಾಗು ಸಿದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲಾಗಿದ್ದು, ಒಂದು ಮತದಾನ ಕೇಂದ್ರದಲ್ಲಿ ೪ ಸಿಬ್ಬಂದಿಗಳು, ಇಬ್ಬರು ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ.
    ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ವರ್ಗದವರು ವಾಸಿಸುತ್ತಿರುವ ಈ ವಾರ್ಡ್ ಜನ್ನಾಪುರ ಭಾಗದಲ್ಲಿದ್ದು, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ರಾಜಪ್ಪ ಬಡಾವಣೆ ಹಾಗು ಸಿದ್ದಾಪುರ ಎನ್‌ಟಿಬಿ ಬಡಾವಣೆಯನ್ನು ಈ ವಾರ್ಡ್ ಒಳಗೊಂಡಿದೆ. ಮೂಲ ನಿವಾಸಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
    ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಜಿ ಲೋಹಿತಾ ನಂಜಪ್ಪ, ಜೆಡಿಎಸ್ ಅಭ್ಯರ್ಥಿಯಾಗಿ ಆರ್. ನಾಗರತ್ನ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ರಮಾ ವೆಂಕಟೇಶ್ ಕಣದಲ್ಲಿದ್ದು, ಸೆ.೬ರಂದು ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ಒಟ್ಟು ೩೫ ವಾರ್ಡ್‌ಗಳ ಪೈಕಿ ೧ ಪಕ್ಷೇತರ, ೧೮ ಕಾಂಗ್ರೆಸ್, ೧೧ ಜೆಡಿಎಸ್ ಮತ್ತು ೪ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

No comments:

Post a Comment