Friday, September 3, 2021

ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತದಾನ ಶಾಂತಿಯುತ : ಮಧ್ಯಾಹ್ನದ ವರೆಗೂ ಬಿರುಸಿನ ಮತದಾನ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಜಯಶ್ರೀ ವೃತ್ತದಲ್ಲಿರುವ ಮತಗಟ್ಟೆಯಲ್ಲಿ ವಯೋವೃದ್ಧರೊಬ್ಬರು ಕುಟುಂಬಸ್ಥರ ನೆರವಿನೊಂದಿಗೆ ಮತ ಚಲಾಯಿಸಿ ತೆರಳುತ್ತಿರುವುದು.
    ಭದ್ರಾವತಿ, ಸೆ. ೩: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತದಾನ ಶುಕ್ರವಾರ ಶಾಂತಿಯುತವಾಗಿ ನಡೆದಿದ್ದು, ಮಧ್ಯಾಹ್ನದವರೆಗೂ ಬಿರುಸಿನಿಂದ ಕೂಡಿರುವುದು ಕಂಡು ಬಂದಿತು.
    ಬೆಳಿಗ್ಗೆ ೭ ಗಂಟೆಗೆ ೪ ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದ್ದು, ಕಣದಲ್ಲಿರುವ ೩ ಅಭ್ಯರ್ಥಿಗಳಿಗೂ ವಾರ್ಡ್ ವ್ಯಾಪ್ತಿಯಲ್ಲಿ ಮತದಾನ ಮಾಡುವ ಹಕ್ಕು ಇಲ್ಲದಿರುವುದು ಈ ಚುನಾವಣೆಯ ವಿಶೇಷಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಾರ್ಡ್ ನಂ.೩೩ರ ವ್ಯಾಪ್ತಿಯಲ್ಲಿ, ಬಿಜೆಪಿ ಅಭ್ಯರ್ಥಿ ವಾರ್ಡ್ ನಂ.೩೨ರ ವ್ಯಾಪ್ತಿಯಲ್ಲಿ ಹಾಗು ಜೆಡಿಎಸ್ ಅಭ್ಯರ್ಥಿ ವಾರ್ಡ್ ೩೦ರ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
    ಎಲ್ಲಾ ೪ ಮತಗಟ್ಟೆಗಳ ಬಳಿ ೩ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಜಮಾಯಿಸಿರುವುದು ಕಂಡು ಬಂದಿತು. ಮತಗಟ್ಟೆ ಸಮೀಪದಲ್ಲಿ ಅಭ್ಯರ್ಥಿಗಳ ಪರವಾಗಿ ಭರ್ಜರಿಯಾಗಿ ಮತಯಾಚನೆ ನಡೆಯಿತು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ  ಕೋವಿಡ್-೧೯ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿತು.
    ಮತಗಟ್ಟೆಗಳ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ನಡುವೆ ಮತದಾರರನ್ನು ಸೆಳೆಯಲು ತೆರೆಮರೆಯಲ್ಲಿ ನಾನಾ ರೀತಿಯ ಕಸರಸ್ತುಗಳನ್ನು ನಡೆಸುತ್ತಿರುವುದು ಕಂಡು ಬಂದಿತು. ಜೆಡಿಎಸ್ ಪ್ರಾಬಲ್ಯಿವಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ಹಿಡಿತಕ್ಕೆ ಪಡೆದುಕೊಳ್ಳುವ ತವಕ ಕಾಂಗ್ರೆಸ್ ಹೊಂದಿದ್ದು, ಈ ಬಾರಿ ಸಹ ಜೆಡಿಎಸ್ ಪ್ರಬಲ ಪ್ರತಿಸ್ಪರ್ಧಿಯಾಗಿರುವುದು ಕಂಡು ಬಂದಿತು.


ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯ ಮತದಾನದಂದು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಪರವಾಗಿ ಮತಯಾಚನೆ ನಡೆಸಿದರು.


No comments:

Post a Comment