ಜೆಡಿಎಸ್‌ಗೆ ಕಾಂಗ್ರೆಸ್ ತೀವ್ರ ಪೈಪೋಟಿ : ಸಂಗಮೇಶ್ವರ್ ಕುಟುಂಬ ವರ್ಗದವರ ತಂತ್ರಗಾರಿಕೆ ಫಲಿಸುವುದೇ?
ಭದ್ರಾವತಿ, ಸೆ. ೩: ನಗರಸಭೆ ವಾರ್ಡ್ ನಂ.೨೯ರ ಮತದಾನ ಶುಕ್ರವಾರ ಸಂಜೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಶೇ.೬೪.೨೭ರಷ್ಟು ಮತದಾನ ನಡೆದಿದೆ.
ಒಟ್ಟು ೩೪೨೩ ಮತದಾರರ ಪೈಕಿ ೧೧೦೭ ಪುರುಷ ಹಾಗು ೧೦೯೩ ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ. ಮತಗಟ್ಟೆ ಭಾಗ ಸಂಖ್ಯೆ ೧೧೧ರಲ್ಲಿ ೪೦೨, ೧೧೨ರಲ್ಲಿ ೪೨೦, ೧೧೩ರಲ್ಲಿ ೭೩೭ ಮತ್ತು ೧೧೪ರಲ್ಲಿ ೬೪೧ ಒಟ್ಟು ೨೨೦೦ ಮತಗಳು ಚಲಾವಣೆಯಾಗಿವೆ. ಸೆ.೬ರಂದು ಮತ ಎಣಿಕೆ ನಡೆಯಲಿದೆ.
ಈ ನಡುವೆ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈ ಬಾರಿ ಚುನಾವಣೆಯಲ್ಲೂ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತ ಲಭಿಸುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಮತ್ತೊಂದೆಡೆ ಕಾಂಗ್ರೆಸ್ ಸಹ ಹೆಚ್ಚಿನ ಮತ ಪಡೆದುಕೊಳ್ಳುವ ಲಕ್ಷಣಗಳು ಎದ್ದು ಕಾಣುತ್ತಿದೆ.
ಜೆಡಿಎಸ್ ಪ್ರಾಬಲ್ಯವಿರುವ ವಾರ್ಡನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂಬ ಪ್ರತಿಷ್ಠೆಯೊಂದಿಗೆ ಸ್ವತಃ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ಅಖಾಡಕ್ಕೆ ಇಳಿದು ಹಲವು ತಂತ್ರಗಾರಿಕೆಯನ್ನು ನಡೆಸಿರುವುದು ಜೆಡಿಎಸ್ ಮತ ಗಳಿಕೆ ಪ್ರಮಾಣಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮತ್ತೊಂದೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಇಲ್ಲದಿರುವುದು ಸಹ ಜೆಡಿಎಸ್‌ಗೆ ಹಿನ್ನಡೆಯನ್ನುಂಟು ಮಾಡಿದೆ. ಇವೆಲ್ಲದರ ನಡುವೆ ಈ ಬಾರಿ ಸಹ ನಾವೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸ ಸಹ ಜೆಡಿಎಸ್ ಸೋಲಿಗೆ ಕಾರಣವಾಗಲಿವೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಜನರಿಗೆ ಹೆಚ್ಚಿನ ಒಲವಿಲ್ಲ. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ತಂತ್ರಗಾರಿಕೆ ನಡೆಸಿದ್ದರೂ ಸಹ ಫಲ ನೀಡಿಲ್ಲ. ಜೆಡಿಎಸ್‌ಗೆ ಹೆಚ್ಚಿನ ಮತಗಳು ಲಭಿಸಲಿವೆ. ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಸಹ ನಡೆಯುತ್ತಿದೆ. ಈ ನಡುವೆ ಬಿಜೆಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮತಗಳನ್ನು ಸೆಳೆದಿರುವ ಸಾಧ್ಯತೆ ಹೆಚ್ಚಾಗಿದೆ.
No comments:
Post a Comment