ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರ ವಿರುಧ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಭದ್ರಾವತಿ, ಅ. ೨೮: ಲಂಚ ಪಡೆಯುವುದು ಮಾತ್ರ ತಪ್ಪಲ್ಲ. ಕೊಡುವುದು ಸಹ ತಪ್ಪು ಎಂದು ಶಿವಮೊಗ್ಗ, ಚಿತ್ರದುರ್ಗ ವಿಭಾಗದ ಲೋಕಾಯುಕ್ತ ಅಧೀಕ್ಷಕ ಆರ್.ವಾಸುದೇವ್ ರಾವ್ ಹೇಳಿದರು.
ಅವರು ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರ ವಿರುಧ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಂಚ ಕೊಡುವವರು ಇರುವತನಕ ಪಡೆಯುವವರು ಸಹ ಇರುತ್ತಾರೆ. ಭ್ರಷ್ಟಾಚಾರದಲ್ಲಿ ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಲಂಚ ನೀಡಿ ಒತ್ತಡ ಹಾಕುವ ಮೂಲಕ ಕೆಲಸ ಮಾಡಿಸಿಕೊಳ್ಳುವುದು ಸಹ ಅಪರಾಧವಾಗಿರುತ್ತದೆ. ಈ ಹಿನ್ನಲೆಯಲ್ಲಿ ಇವರ ಮೇಲೂ ಸಹ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ ಎಂದರು.
ಸರ್ಕಾರಿ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಭ್ರಷ್ಟಾಚಾರ ಮುಕ್ತರಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರತಿಜ್ಞಾ ವಿಧಿ ಬೋಧನೆ ಹಾಗು ಸ್ವೀಕಾರದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಬದಲಿಗೆ ಕರ್ತವ್ಯದಲ್ಲಿ ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಈ ನಿಟ್ಟಿನಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದರು.
ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಹೆಚ್ಚಿನ ಮಾಹಿತಿ ಇರುವುದಿಲ್ಲ. ಸರ್ಕಾರದ ಸೇವೆಯಲ್ಲಿರುವ ನಾವುಗಳು ಜನರ ಸೇವಕರು ಎಂಬುದನ್ನು ಅರಿತು ಅವರ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಿ ಕೊಡಲು ಮುಂದಾಗಬೇಕೆಂದರು.
ಲೋಕಾಯುಕ್ತ ಉಪಪೊಲೀಸ್ ಅಧೀಕ್ಷಕ ಮೃತ್ಯುಂಜಯ ಭ್ರ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞಾವಿಧಿ ಭೋದಿಸಿದರು.
ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೌರಾಯುಕ್ತ ಕೆ. ಪರಮೇಶ್, ಲೋಕಾಯುಕ್ತ ಇಲಾಖೆಯ ರಾಧಕೃಷ್ಣ, ಜಗನ್ನಾಥ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
No comments:
Post a Comment