ಭದ್ರಾವತಿ, ಅ. ೨೯: ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರಿಗೆ ಜನರ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಅಲ್ಲದೆ ಜನರ ಸಮಸ್ಯೆಗಳಿಗೆ ಪೂರಕ ಸ್ಪಂದಿಸುತ್ತಾರೆ ಎಂದು ಕರ್ನಾಟಕ ರಾಜ್ಯ ದಲಿತ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷೆ ಎಸ್. ಉಮಾ ಹೇಳಿದರು.
ಅವರು ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಹೊಸಮನೆ ಶ್ರೀ ಕೃಷ್ಣ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಮನೋಭಾವನೆ ಹೋರಾಟದಿಂದ ಮಾತ್ರ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಚನ್ನಪ್ಪ ಅವರು ವಿದ್ಯಾರ್ಥಿ ದೆಸೆಯಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋರಾಟದಿಂದ ರಾಜಕೀಯವಾಗಿ ಮೇಲೆ ಬಂದವರು. ಪ್ರಸ್ತುತ ನಗರಸಭೆ ಉಪಾಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಉತ್ತಮ ಸೇವೆ ಸಲ್ಲಿಸುವ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹುದ್ದೆ ಲಭಿಸುವಂತಾಗಲಿ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ವಿದ್ಯಾರ್ಥಿ ದೆಸೆಯಿಂದ ಸಂಘಟನೆಯಲ್ಲಿ ಬೆಳೆದು ಬಂದು ರಾಜಕೀಯವಾಗಿ ಹಲವು ಸೋಲು ಗೆಲುವುಗಳನ್ನು ಕಂಡಿದ್ದೇನೆ. ಸಮಾಜದ ಎಲ್ಲರ ಸಹಕಾರದಿಂದ ಪ್ರಸ್ತುತ ನಗರಸಭೆ ಉಪಾಧ್ಯಕ್ಷನಾಗಿರುವುದು ಹೆಮ್ಮೆಯ ವಿಚಾರವಾಗಿದ್ದು, ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಮೊದಲ ಆದ್ಯತೆಯಾಗಿ ಸಮಾಜದಲ್ಲಿ ಹಿಂದುಳಿದವರು, ಶೋಷಿತರು, ದಲಿತರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು.
ಮೆಸ್ಕಾಂ ನಿವೃತ್ತ ಇಂಜಿನಿಯರ್ ಸಿದ್ದರಾಜು, ಹಿರಿಯ ಸಮಾಜ ಸೇವಕಿ ಧಮಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೊಸಮನೆ ಭಾಗದ ಛಲವಾದಿ ಸಮಾಜದ ನಿವಾಸಿಗಳಾದ ನಿಂಗಸ್ವಾಮಿ, ಸಿದ್ದು, ಕುಮಾರ್, ಪ್ರಶಾಂತ್, ಸತೀಶ್, ಪ್ರದೀಪ್, ಆದಿತ್ಯ ಶ್ಯಾಮ್, ಗಂಗಾಧರ್, ಮಧು, ವಿನಯ್, ಸಿದ್ದರಾಜು ಸೇರಿದಂತೆ ಇನ್ನಿತರರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ವಿನಯ್ ಸ್ವಾಗತಿಸಿ, ಉಪನ್ಯಾಸಕಿ ರಾಜೇಶ್ವರಿ ನಿರೂಪಸಿದರು. ನರಸಿಂಹ ಮೂರ್ತಿ ವಂದಿಸಿದರು.
ಭದ್ರಾವತಿ ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಹೊಸಮನೆ ಶ್ರೀ ಕೃಷ್ಣ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
No comments:
Post a Comment