Friday, October 15, 2021

ವೈಭವಯುತವಾಗಿ ಜರುಗಿದ ನಾಡಹಬ್ಬ ದಸರಾ ಮೆರವಣಿಗೆ

ಬನ್ನಿ ಮುಡಿದ ತಹಸೀಲ್ದಾರ್ ಆರ್. ಪ್ರದೀಪ್


ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಸೇರಿದಂತೆ ಇನ್ನಿತರರು ನಗರದ ಹಿರಿಯ ಕುಸ್ತಿಗಳನ್ನು ಸನ್ಮಾನಿಸಿ ಗೌರವಿಸಿದರು.
    ಭದ್ರಾವತಿ, ಅ. ೧೫: ನಗರಸಭೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಮೆರವಣಿಗೆ ಕೋವಿಡ್-೧೯ರ ನಡುವೆಯೂ ವೈಭವಯುತವಾಗಿ ನಡೆಯಿತು.
    ನಗರದ ಬಿ.ಎಚ್ ರಸ್ತೆ, ಲೋಯರ್‌ಹುತ್ತಾ ಶ್ರೀ ತಿರುಮಲ ದೇವಸ್ಥಾನದ ಬಳಿ ಶಾಸಕ ಬಿ.ಕೆ ಸಂಗಮೇಶ್ವರ್ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಹಾಗು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ನಗರದ ವಿವಿಧೆಡೆಗಳಿಂದ ಅಲಂಕೃತಗೊಂಡ ದೇವಾನುದೇವತೆಗಳು ಪಾಲ್ಗೊಂಡಿರುವುದು.
    ಮೆರವಣಿಗೆಯಲ್ಲಿ ಲಕ್ಷ್ಮೀನರಸಿಂಹಸ್ವಾಮಿ, ಕೆರೆಕೋಡಮ್ಮ, ಅಂತರಘಟ್ಟಮ್ಮ, ಕಾಳಿಕಾಂಬ, ವಿಶ್ವಸ್ವರೂಪಿಣಿ ಮಾರಿಯಮ್ಮ, ಏಳುಕೋಟಿ ಮೈಲಾರಲಿಂಗೇಶ್ವರ, ಸಿಗಂದೂರು ಚೌಡೇಶ್ವರಿ, ಸವದತ್ತಿ ಯಲ್ಲಮ್ಮ, ದುರ್ಗಾ ಪರಮೇಶ್ವರಿ, ಎಲ್ಲಮ್ಮ ದೇವಿ. ಕುಕ್ಕುವಾಡೇಶ್ವರಿ ಸೇರಿದಂತೆ ನಗರದ ವಿವಿಧೆಡೆಗಳಿಂದ ಅಲಂಕೃತಗೊಂಡ ದೇವಾನುದೇವತೆಗಳು ಹಾಗು ತಾಲೂಕು ಆರೋಗ್ಯ ಇಲಾಖೆ ಮತ್ತು ನಗರಸಭೆ ವತಿಯಿಂದ ಕೊರೋನಾ ಸೋಂಕು ಜಾಗೃತಿ ಹಾಗು ಸ್ವಚ್ಚತೆ ಅರಿವು ಮೂಡಿಸುವ ಸ್ತಬ್ದ ಚಿತ್ರ, ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಸಮಗ್ರ ಶಿಕ್ಷಣ ಸಂಸ್ಥೆವತಿಯಿಂದ ಆಕರ್ಷಕವಾದ ಮಹಿಷಾಸುರ ಮರ್ದಿನಿ ಸ್ತಬ್ದ ಚಿತ್ರ, ಡೊಳ್ಳುಕುಣಿತ, ವೀರಗಾಸೆ, ಕೋಲಾಟ, ಗೊಂಬೆಗಳು, ಲಂಬಾಣಿ ನೃತ್ಯ, ಕೀಲು ಕುದುರೆ, ಯಕ್ಷಗಾನ ಗೊಂಬೆಗಳ ತಂಡಗಳು ನೋಡುಗರ ಕಣ್ಮನ ಸೆಳೆದವು. ಮೆರವಣಿಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ಕನಕ ಮಂಟಪ ಮೈದಾನ ತಲುಪಿತು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್ ಧಾರ್ಮಿಕ ಆಚರಣೆಗಳೊಂದಿಗೆ ಬನ್ನಿ ಮುಡಿಯುವ ಮೂಲಕ ದಸರಾ ನಾಡಹಬ್ಬಕ್ಕೆ ತೆರೆ ಎಳೆದರು. ಕೊನೆಯಲ್ಲಿ ಪಟಾಕಿ ಸಿಡಿಮದ್ದುಗಳ ಮೂಲಕ ರಾವಣನ ಸಂಹಾರ ನಡೆಯಿತು. ಹಳೇನಗರದ  ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥಶರ್ಮ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು.



ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿರುವುದು.

    ನಗರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ  ಟಿ.ವಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪೌರಕಾರ್ಮಿಕರು, ನಗರಸಭೆ ನೂತನ ಸದಸ್ಯರು, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಆಶೋಕ್, ಕಂದಾಯಾಧಿಕಾರಿ ಪ್ರಶಾಂತ್, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರಾದ ಹಾ. ರಾಮಪ್ಪ, ನರಸಿಂಹಚಾರ್, ರಮಾಕಾಂತ್, ಆರ್. ಕರುಣಾಮೂರ್ತಿ, ಬದರಿನಾರಾಯಣ, ಆಂಜನಪ್ಪ, ವಿಶಾಲಾಕ್ಷಿ ಸೇರಿದಂತೆ ನಗರದ ವಿವಿಧೆಡೆಗಳಿಂದ ನೂರಾರು ಮಂದಿ ಪಾಲೊಂಡಿದ್ದರು. ಈ ಬಾರಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಶ್ರೀ ಚಾಮುಂಡೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.

No comments:

Post a Comment