ಭದ್ರಾವತಿ, ಅ. ೧೫:ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಎಂಪಿಎಂ ಶಿಕ್ಷಣ ಸಂಸ್ಥೆಯ ಕಾಗದನಗರ ಆಂಗ್ಲ ಶಾಲೆ ೪೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಶಾಲೆಯ ಹಳೇಯ ವಿದ್ಯಾರ್ಥಿಗಳು ಒಂದೆಡೆ ಸಂಘಟಿತರಾಗಿ ಶಾಲೆಯ ಭವ್ಯ ಪರಂಪರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಅ.೧೬ರಂದು UDHYATHA ಎಂಬ ಬೃಹತ್ ಕಾರ್ಯಕ್ರಮವನ್ನು ೧೯೮೮ ರಿಂದ ೨೦೨೦ರ ವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸುಮಾರು ೬೦೦ ರಿಂದ ೭೦೦ ಮಂದಿ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಆಯೋಜಿಸಿದ್ದು, ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಒಂದೆಡೆ ಶಾಲೆಯ ೪೦ ವರ್ಷಗಳ ಇತಿಹಾಸವನ್ನು ಇಂದಿನ ಜನರಿಗೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಮತ್ತೊಂದೆಡೆ ತಮಗೆ ಪಾಠ ಕಲಿಸಿಕೊಟ್ಟ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಕರೆ ತರುವ ಪ್ರಯತ್ನ ಇದಾಗಿದ್ದು, ಇನ್ನೊಂದೆಡೆ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ತಮ್ಮ ಸ್ವಂತ ಹಣದಲ್ಲಿ ಶಾಲೆಯನ್ನು ನವೀಕರಣಗೊಳಿಸಿರುವ ಸಂಭ್ರಮ ಕ್ಷಣ ಸಹ ಇದಾಗಿದೆ. ಇವೆಲ್ಲದರ ಉದ್ದೇಶ ಪ್ರಸ್ತುತ ಎಂಪಿಎಂ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಕಾರ್ಮಿಕರು, ಕುಟುಂಬ ವರ್ಗದವರಿಲ್ಲದೆ ಬಿಕೋ ಎನ್ನುತ್ತಿರುವ ಕಾಗದನಗರದಲ್ಲಿ ಈ ಶಾಲೆಗೆ ಪುನಃ ಮರುಜೀವ ತುಂಬುವುದಾಗಿದೆ. ಒಟ್ಟಾರೆ ಈ ಕಾರ್ಯಕ್ರಮ ಆಯೋಜನೆಗಾಗಿ ಕಳೆದ ೩-೪ ತಿಂಗಳುಗಳಿಂದ ಹಳೇಯ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಹ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ನಡೆಯಲಿದ್ದು, ಯಶಸ್ವಿಗೊಳಿಸುವಂತೆ ಅರುಣ್, ವಿನೂತನ್, ಪ್ರೀತಮ್ ಮತ್ತು ಎಚ್.ಆರ್ ಮಮತ ಸೇರಿದಂತೆ ಹಳೇಯ ವಿದ್ಯಾರ್ಥಿಗಳು ಕೋರಿದ್ದಾರೆ.
No comments:
Post a Comment