ಅ.೧೬ರಂದು ಭದ್ರಾವತಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ
ಭದ್ರಾವತಿ ನಗರಸಭೆ
ಭದ್ರಾವತಿ, ಅ. ೧೫: ಸುಮಾರು ಎರಡೂವರೆ ವರ್ಷಗಳ ನಂತರ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುತ್ತಿದ್ದು, ಈ ಬಾರಿ ಅತಿಹೆಚ್ಚು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಅ.೧೬ರಂದು ನಡೆಯುತ್ತಿದೆ.
ಒಟ್ಟು ೩೫ ಸ್ಥಾನಗಳನ್ನು ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೧೨, ಬಿಜೆಪಿ-೪ ಹಾಗು ೧-ಪಕ್ಷೇತರ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮೀಸಲಾತಿ ಹೊಂದಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಒಟ್ಟು ೪ ಮಹಿಳೆಯರು ಪೈಪೋಟಿಗೆ ಮುಂದಾಗಿದ್ದು, ವಾರ್ಡ್ ನಂ.೨ರ ಗೀತಾ ರಾಜ್‌ಕುಮಾರ್, ವಾರ್ಡ್ ನಂ.೧೩ರ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದು, ಈ ನಾಲ್ವರು ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಮೊದಲು ಯಾರಿಗೆ ಅವಕಾಶ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸಂಬಂಧ ಶನಿವಾರ ಬೆಳಿಗ್ಗೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಮಾತಕತೆ ನಡೆಯಲಿದೆ ಎನ್ನಲಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಒಟ್ಟು ೩ ಮಂದಿ ಅರ್ಹರಿದ್ದು, ಈ ಪೈಕಿ ವಾರ್ಡ್ ನಂ.೯ರ ಚನ್ನಪ್ಪ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ವಾರ್ಡ್ ನಂ.೧೪ರ ಸದಸ್ಯ ಬಿ.ಟಿ ನಾಗರಾಜ್ ಮತ್ತು ವಾರ್ಡ್ ನಂ.೨೬ರ ಸದಸ್ಯೆ ಸರ್ವಮಂಗಳ ಭೈರಪ್ಪ ಸಹ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದಾಗಿದೆ. ಈಗಾಗಲೇ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಈ ಹಿಂದೆ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ. ಉಳಿದಂತೆ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿರುವ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನ ಪುರುಷರಿಗೆ ಬಿಟ್ಟುಕೊಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಸರ್ವಮಂಗಳ ಭೈರಪ್ಪ ಅವರ ಸ್ಪರ್ಧೆಗೆ ಅವಕಾಶ ಸಿಗದಿರಬಹುದು ಎನ್ನಲಾಗಿದೆ.
ನಾಲ್ವರು ಮಹಿಳೆಯರಿಗೂ ಸಮಾನ ಅವಕಾಶ :
ವಾರ್ಡ್ ನಂ.೨೨ರ ಸದಸ್ಯ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪತ್ರಿಕೆಯೊಂದಿಗೆ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿರುವ ನಾಲ್ವರು ಮಹಿಳೆಯರಿಗೂ ಅವಕಾಶ ಕಲ್ಪಿಸಿಕೊಡಲಾಗುವುದು. ಯಾವುದೇ ರೀತಿ ತಾರತಮ್ಯ ಮಾಡದೆ ಅಧಿಕಾರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಒಂದು ವೇಳೆ ಸಮಸ್ಯೆ ಕಂಡು ಬಂದಲ್ಲಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಲಾಗುವುದು. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೋಟಿಸ್ :
ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ೯ನೇ ಅವಧಿಗೆ ಮೀಸಲಾತಿ ನಿಗದಿಪಡಿಸಲಾಗಿದ್ದು, ಈ ಸಂಬಂಧ ಅ.೧೬ರಂದು ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಹಾಗು ಪರಿಜಾತಿ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಟಿಸ್ ಹೊರಡಿಸಿದ್ದಾರೆ.
ಅದರಂತೆ ಬೆಳಿಗ್ಗೆ ೧೦ ಗಂಟೆಯಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆ ನಂತರ ನಾಮಪತ್ರಗಳ ಪರಿಶೀಲನೆ, ಹಿಂಪಡೆಯುವಿಕೆ ನಡೆಯದೆ. ಮಧ್ಯಾಹ್ನ ೧ ಗಂಟೆಗೆ ಸಭೆ ನಡೆಯಲಿದ್ದು, ಅಗತ್ಯವಿದ್ದಲ್ಲಿ ಚುನಾವಣೆ ನಡೆಯಲಿದೆ.
No comments:
Post a Comment