Sunday, January 2, 2022

ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣ : ೫ ಜನರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಜ. ೨: ಕೆಲವು ದಿನಗಳ ಹಿಂದೆ ಆನೇಕೊಪ್ಪ ನಗರಸಭೆ ಪಂಪ್ ಹೌಸ್ ಬಳಿ ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ಕಂಪನಿಯೊಂದರ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರ ವಿರುದ್ಧ ಪ್ರಕರಣ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ಕಾರ್ಮಿಕರಾದ ಸಂತೋಷ್ ಮತ್ತು ಪರಮೇಶ್ ಇಬ್ಬರು ೧೧ ಕೆ.ವಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಜಂಪ್ ಜೋಡಿಸುವಾಗಿ ವಿದ್ಯುತ್ ಪ್ರವಹಿಸಿದ್ದು, ಇದರಿಂದಾಗಿ ಇಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಇಬ್ಬರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
    ಯಾವುದೇ ಸುರಕ್ಷತೆ ಇಲ್ಲದೆ ಕಾಮಗಾರಿ ನಿರ್ವಹಿಸಿದ ಹಾಗು ಸುರಕ್ಷತಾ ಸಲಕರಣೆಗಳನ್ನು ನೀಡದೆ ಇರುವ ಆರೋಪದಡಿ   ವ್ಯಾಪ್ತಿಯ ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ವ್ಯವಸ್ಥಾಪಕರಾದ ವೇದ ಪ್ರಕಾಶ್, ಸೈಟ್ ಸೂಪರ್ ವೈಸರ್ ಮದನ್‌ಕುಮಾರ್ ಹಾಗು ಈ ಭಾಗದ ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಭರ್ಮೇಗೌಡ ಮತ್ತು ಚನ್ನಯ್ಯ ಹಾಗು ಕಿರಿಯ ಇಂಜಿನಿಯರ್ ಲೋಕೇಶ್ ಸೇರಿದಂತೆ ಒಟ್ಟು ೫ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments:

Post a Comment