Monday, March 28, 2022

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮುಷ್ಕರ

ವಿವಿಧ ಬೇಡಿಕೆ ಈಡೇರಿಕೆಗೆ ಅಂಚೆ ನೌಕರರ ಆಗ್ರಹ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಭದ್ರಾವತಿ ಪ್ರಧಾನ ಅಂಚೆ ಕಛೇರಿ ಮುಂಭಾಗ ಅಖಿಲ ಭಾರತ ಅಂಚೆ ನೌಕರರ ಸಂಘಗಳು, ಗ್ರೂಪ್ 'ಸಿ' ಪೋಸ್ಟ್‌ಮ್ಯಾನ್/ಎಂಟಿಎಸ್ ಮತ್ತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಸೋಮವಾರ ಮುಷ್ಕರ ನಡೆಸಲಾಯಿತು.
    ಭದ್ರಾವತಿ, ಮಾ. ೨೮: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ನಗರದ ಪ್ರಧಾನ ಅಂಚೆ ಕಛೇರಿ ಮುಂಭಾಗ ಅಖಿಲ ಭಾರತ ಅಂಚೆ ನೌಕರರ ಸಂಘಗಳು, ಗ್ರೂಪ್ 'ಸಿ' ಪೋಸ್ಟ್‌ಮ್ಯಾನ್/ಎಂಟಿಎಸ್ ಮತ್ತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಸೋಮವಾರ ಮುಷ್ಕರ ನಡೆಸಲಾಯಿತು.
    ಪ್ರಮುಖರು ಮಾತನಾಡಿ, ಕಾರ್ಮಿಕ ವರ್ಗಕ್ಕೆ ನೀಡುವ ಸೌಲಭ್ಯಗಳ ವಿತರಣೆಯಲ್ಲಿನ ಹೊಸ ನೀತಿಗಳು ನಿಜಕ್ಕೂ ಕಾರ್ಮಿಕ ವರ್ಗಕ್ಕೆ ಮಾರಕವಾಗಿವೆ. ಸರ್ಕಾರದ ಖಾಸಗೀಕರಣದ ನೀತಿಯಿಂದಾಗಿ ಅನೇಕ ಲಾಭದಾಯಕ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ೩೨ ಸರ್ಕಾರಿ ಇಲಾಖೆಗಳ ಖಾಸಗೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಆರೋಪಿಸಿದರು.
    ಅಂಚೆ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಸಹ ಭರ್ತಿಮಾಡದೆ ವಿನಾಕಾರಣ ನಿರುದ್ಯೋಗ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಈಗಾಗಲೇ ದೆಹಲಿ ದಕ್ಷಿಣ ವಿಭಾಗದಲ್ಲಿ ಅಂಚೆ ಸೇವೆ ಬಟವಾಡೆಗಾಗಿ ಹೊರಗುತ್ತಿಗೆ ಆದೇಶ ಹೊರಡಿಸಲಾಗಿದೆ. ಇದರಿಂದ ಅಂಚೆ ಇಲಾಖೆ ಸಹ ಭವಿಷ್ಯದಲ್ಲಿ ಖಾಸಗೀಕರಣಗೊಳ್ಳುವ ಭೀತಿ ಎದುರಿಸುವಂತಾಗಿದೆ ಎಂದು ದೂರಿದರು.
    ಎನ್‌ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ನೀತಿ ಜಾರಿಗೊಳಿಸಬೇಕು. ಜನವರಿ ೨೦೨೦ರಿಂದ ಜೂನ್ ೨೦೨೧ರ ವರೆಗೆ ತಡೆಹಿಡಿಯಲಾದ ಡಿಎ/ಡಿಆರ್ ಬಾಕಿ ತಕ್ಷಣ ಪಾವತಿಸಬೇಕು. ಗ್ರಾಮೀಣ ಡಾಕ್ ಸೇವಕರಿಗೆ ನಾಗರೀಕ ಸೇವಕ ಸ್ಥಾನಮಾನ ನೀಡುವ ಜೊತೆಗೆ ಸೇವೆಯನ್ನು ಕ್ರಮ ಬದ್ದಗೊಳಿಸಬೇಕು. ಗ್ರಾಮೀಣ ಅಂಚೆ ನೌಕರರಿಗೆ ೧೮೦ ದಿನಗಳ ಗಳಿಕೆ ರಜೆಯನ್ನು ಉಳಿಸಿಕೊಳ್ಳಲು ಅವಕಾಶ ಕೊಡಬೇಕು. ಪೆನ್ಸನ್ ಸೌಲಭ್ಯ ನೀಡಬೇಕು. ಗುಂಪು ವಿಮೆಯನ್ನು ರು.೫ ಲಕ್ಷಕ್ಕೆ ಹೆಚ್ಚಿಸಬೇಕು. ಹಿರಿಯ ನೌಕರರಿಗೆ ಕಮಲೇಶ್ ಚಂದ್ರ ವರದಿಯಂತೆ ಎಂಎಸಿಪಿ ನೀಡಬೇಕು ಹಾಗು ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಲಾಯಿತು.
    ಗ್ರೂಪ್ 'ಸಿ' ಎಐಪಿಇಯು ಸಹ ಕಾರ್ಯದರ್ಶಿ ಎಂ.ಎಚ್ ಕುಮಾರ್, ಎಐಜಿಡಿಎಸ್‌ಯು ಖಜಾಂಚಿ ಎಚ್.ವಿ ರಾಜ್‌ಕುಮಾರ್, ಎಐಪಿಇಯು ಪೋಸ್ಟ್ ಮ್ಯಾನ್ & ಎಂಟಿಎಸ್ ಉಪಾಧ್ಯಕ್ಷ ಡಿ. ಗೋವಿಂದರಾಜು, ಸಹ ಕಾರ್ಯದರ್ಶಿ ಉದಯಾಚಾರ್, ಗ್ರೂಪ್ 'ಸಿ' ಎಐಪಿಇಯು ನಾಗರಾಜ್ ಪೂಜಾರ್ ಮತ್ತು ಪ್ರಸನ್ನ ಕುಮಾರ್ ಸೇರಿದಂತೆ ಪ್ರಮುಖರು, ಅಂಚೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.


No comments:

Post a Comment