Monday, March 28, 2022

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮೊದಲ ದಿನ ೪೩೭೭ ವಿದ್ಯಾರ್ಥಿಗಳು ಹಾಜರು, ೧೧೬ ವಿದ್ಯಾರ್ಥಿಗಳು ಗೈರು

    

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮೊದಲ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು.
    ಭದ್ರಾವತಿ, ಮಾ. ೨೮: ತಾಲೂಕಿನಲ್ಲಿ ಮೊದಲ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ೪೩೭೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, ಒಟ್ಟು ೪೪೯೩ ವಿದ್ಯಾರ್ಥಿಗಳ ಪೈಕಿ ೪೩೭೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೧೬ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
    ೪೩೬೨ ವಿದ್ಯಾರ್ಥಿಗಳು ಮೊದಲ ಬಾರಿಗೆ  ಹಾಗು ೧೫ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದಿದ್ದು, ವಿಶೇಷ ಕೊಠಡಿಯಲ್ಲಿ ಓರ್ವ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗುವ ಮೂಲಕ ಯಾವುದೇ ಗೊಂದಲಗಳು ಇಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಒಟ್ಟು ೧೬ ಪರೀಕ್ಷಾ ಕೇಂದ್ರಗಳ ಪೈಕಿ ಪೂರ್ಣಪ್ರಜಾ ವಿದ್ಯಾಸಂಸ್ಥೆಯಲ್ಲಿ ೧ ಖಾಸಗಿ ಖಾಸಗಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.     ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನೊಳಗೊಂಡ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹಿಜಾಬ್ ಸಂಬಂಧ ಸಹ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
    ನಿರ್ಭೀತಿಯಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು:
    ಕಳೆದ ೨ ವರ್ಷಗಳಿಂದ ಕೋವಿಡ್-೧೯ರ ಪರಿಣಾಮ ಈ ಹಿಂದೆ ವಿದ್ಯಾರ್ಥಿಗಳು ಸೋಂಕು ಹರಡುವ ಭಯಭೀತಿಯಲ್ಲಿ ಪರೀಕ್ಷೆ ಎದುರಿಸಿದ್ದರು. ಆದರೆ ಈ ಬಾರಿ ಯಾವುದೇ ಭಯವಿಲ್ಲದೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ಮೂಲಕ ಗಮನ ಸೆಳೆದರು. ಆದರೂ ಮುನ್ನಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದು, ಕೋವಿಡ್ ಕುರಿತು ಜಾಗೃತಿ ಮೂಡಿಸಿದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

No comments:

Post a Comment