ಅನುದಾನ ಬರುವ ನಿರೀಕ್ಷೆಯಲ್ಲಿ ನಿರ್ಮಿತಿ ಕೇಂದ್ರದ ಹಣದಿಂದಲೇ ಕಾಮಗಾರಿ ಪೂರ್ಣ
ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ಬಹುತೇಕ ಪೂರ್ಣಗೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ.
* ಅನಂತಕುಮಾರ್
ಭದ್ರಾವತಿ, ಏ. ೧೩: ಕ್ಷೇತ್ರದಲ್ಲಿ ಸುಮಾರು ೪ ದಶಕಗಳ ಹೋರಾಟಕ್ಕೆ ಇದೀಗ ಫಲ ಲಭಿಸಿದ್ದು, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಇದೀಗ ಬಹುತೇಕ ಪೂರ್ಣಗೊಂಡಿದೆ.
ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಅದರ ಮೂಲ ಪ್ರೇರಕ ಶಕ್ತಿ, ಜಗತ್ತಿನ ಶ್ರೇಷ್ಠ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಭವನದ ಕನಸು ಇದೀಗ ನನಸಾಗಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ವಿವಿಧ ದಲಿತಪರ ಸಂಘಟನೆಗಳು ಸುಮಾರು ೪ ದಶಕಗಳ ಹಿಂದೆ ಆರಂಭಿಸಿದ ಹೋರಾಟ ಇದೀಗ ಅಂತ್ಯಗೊಳ್ಳುವಂತಾಗಿದೆ.
ಆರಂಭದ ಹೋರಾಟದಲ್ಲಿ ಜಯ ಲಭಿಸಿದಾದರೂ ನಿರೀಕ್ಷೆಯಂತೆ ಸುಸಜ್ಜಿತ ಭವನ ನಿರ್ಮಾಣಗೊಳ್ಳಲಿಲ್ಲ. ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾ ರೈಲ್ವೆ ಕೆಳಸೇತುವೆ ಬಳಿ ಅತಿ ಚಿಕ್ಕದಾದ, ಗುಡಿಸಲಿನ ಮಾದರಿಯ ಭವನ ನಿರ್ಮಾಣಗೊಂಡಿತು. ಆದರೆ ಈ ಭವನವನ್ನು ಯಾರು ಸಹ ಅಂಬೇಡ್ಕರ್ ಭವನವೆಂದು ಸ್ವೀಕರಿಸಲು ಸಿದ್ದರಿರಲಿಲ್ಲ. ಈ ಹಿನ್ನಲೆಯಲ್ಲಿ ಈ ಭವನ ಸುಮಾರು ೪-೫ ವರ್ಷಗಳ ವರೆಗೆ ಪಾಳು ಬಿದ್ದಿತ್ತು. ನಂತರದ ದಿನಗಳಲ್ಲಿ ಈ ಭವನವನ್ನು ನಗರಸಭೆ ಆಡಳಿತ ಸಾರ್ವಜನಿಕ ಗ್ರಂಥಾಲಯಕ್ಕೆ ಬಿಟ್ಟುಕೊಡುವ ಮೂಲಕ ಇದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಂಥಾಲಯ ಇಲಾಖೆಗೆ ವಹಿಸಿದೆ.
ಪುನಃ ಮುಂದುವರೆದ ಹೋರಾಟ : ಜಾಗ ಹುಡುಕಾಟ
ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಪುನಃ ದಲಿತಪರ ಸಂಘಟನೆಗಳು ಹೋರಾಟ ಮುಂದುವರೆಸಿದ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲು ಹೊಸಮನೆ ಮುಖ್ಯರಸ್ತೆಯಲ್ಲಿರುವ ಹಳೇ ಸಂತೆ ಮೈದಾನದಲ್ಲಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಯಿತು. ಆದರೆ ಈ ಸ್ಥಳ ಸೂಕ್ತವಲ್ಲ ಬೇರೆಡೆ ನಿರ್ಮಿಸಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೈಬಿಡಲಾಯಿತು. ನಂತರ ಜಟ್‌ಪಟ್ ನಗರದಲ್ಲಿ ಭವನಕ್ಕೆ ಜಾಗ ಮಂಜೂರಾತಿ ಪಡೆದುಕೊಂಡರೂ ಈ ಜಾಗ ಸಹ ಸೂಕ್ತವಲ್ಲ ಎಂದು ಕೈಬಿಡಲಾಯಿತು. ಕೊನೆಯದಾಗಿ ತಾಲೂಕು ಕಚೇರಿ ರಸ್ತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಗರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ೨೦೧೭ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು ೫ ವರ್ಷಗಳ ನಂತರ ಬಹುತೇಕ ಪೂರ್ಣಗೊಂಡಿದೆ.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒಟ್ಟು ಸುಮಾರು ರು. ೪.೩೭ ಕೋ. ವೆಚ್ಚ ನಿರೀಕ್ಷಿಸಲಾಗಿದೆ. ಇದೀಗ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ರು.೨ ಕೋ. ಹಾಗು ನಗರಸಭೆ ಅನುದಾನ ರು. ೫೦ ಲಕ್ಷ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರು.೩೭.೩೭ ಲಕ್ಷ ಅನುದಾನ ಹಾಗು ನಿರ್ಮಿತಿ ಕೇಂದ್ರದಿಂದ ರು. ೮೫ ಲಕ್ಷ ಸೇರಿ ರು.೩.೭೨ ಕೋ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದೆ. ಸರ್ಕಾರದಿಂದ ಈಗಾಗಲೇ ರು. ೧.೫ ಕೋ. ಮಂಜೂರಾತಿಯಾಗಿದ್ದು, ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಆ ನಂತರ ಉಳಿಕೆ ಕಾಮಗಾರಿಗಳು ನಡೆಯಲಿವೆ. ಸದ್ಯಕ್ಕೆ ಸಭೆ-ಸಮಾರಂಭಗಳನ್ನು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಭವನ ಸಿದ್ದಗೊಳಿಸಲಾಗಿದೆ.
- ಜಿತೇಂದ್ರ, ಇಂಜಿನಿಯರ್, ನಿರ್ಮಿತಿ ಕೇಂದ್ರ, ಶಿವಮೊಗ್ಗ
ನಿರ್ಮಿತಿ ಕೇಂದ್ರದ ರು. ೮೫ ಲಕ್ಷ ಬಳಸಿ ಕಟ್ಟಡ ಕಾಮಗಾರಿ ಪೂರ್ಣ :
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನ ನಿರ್ಮಿಸಲಾಗುತ್ತಿದ್ದು, ಆರಂಭದಲ್ಲಿ ಇಲಾಖೆಗೆ ಸರ್ಕಾರದಿಂದ ರು. ೧ ಕೋ. ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನ ಬಳಸಿಕೊಂಡು ಮೊದಲ ಹಂತದ ಕಾಮಗಾರಿ ನಡೆಸಲಾಯಿತು. ಹೆಚ್ಚಿನ ಅನುದಾನ ಅಗತ್ಯತೆ ಹಿನ್ನಲೆಯಲ್ಲಿ ಪುನಃ ಇಲಾಖೆಗೆ ರು. ೧ ಕೋ. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ನಗರಸಭೆ ವತಿಯಿಂದ ರು.೫೦ ಲಕ್ಷ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರು.೩೭.೩೭ ಲಕ್ಷ ಸೇರಿದಂತೆ ಒಟ್ಟು ರು.೨.೮೭ ಕೋ. ಅನುದಾನ ಲಭ್ಯವಾದರೂ ಸಹ ಭವನ ಪೂರ್ಣಗೊಳ್ಳಲಿಲ್ಲ. ಎಲೆಕ್ಟ್ರಿಕಲ್ ವರ್ಕ್ಸ್, ಫ್ಲಂಬಿಂಗ್, ಸ್ಟೇಜ್ ಪ್ಲೋರಿಂಗ್ ಮತ್ತು ಪೇಟಿಂಗ್ ಕಾಮಗಾರಿಗಳಿಗಾಗಿ ಅಂದಾಜು ರು. ೬೨.೬೩ ಲಕ್ಷ ಅಗತ್ಯವಿರುವುದು ಕಂಡು ಬಂದಿತು. ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ವಿಳಂಬವಾಗುವ ಹಿನ್ನಲೆಯಲ್ಲಿ ಹಾಗು ದಲಿತಪರ ಸಂಘಟನೆಗಳ ಹೋರಾಟಕ್ಕೆ ಮಣಿದು ಸದ್ಯಕ್ಕೆ ನಿರ್ಮಿತಿ ಕೇಂದ್ರದ ರು. ೮೫ ಲಕ್ಷ ಬಳಸಿಕೊಂಡು ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದೆ.
ಅನುದಾನ ಬಿಡುಗಡೆಗೆ ಒತ್ತಾಯ:
ಕೆಲವು ತಿಂಗಳುಗಳ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸಭೆ ಅಧಿವೇಶನದಲ್ಲಿ ಭವನದ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಪ್ರಸ್ತಾಪಿಸಿ ತಕ್ಷಣ ಬಾಕಿ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಇತ್ತೀಚಿಗೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ದಲಿತಪರ ಸಂಘಟನೆಗಳ ಪ್ರಮುಖರು ಸಹ ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದರು. ಈ ನಡುವೆ ಕಳೆದ ೩ ದಿನಗಳಿಂದ ಹೋರಾಟ ಸಹ ನಡೆಯುತ್ತಿತ್ತು. ಇದೀಗ ಎಲ್ಲಾ ಹೋರಾಟಗಳಿಗೂ ತೆರೆ ಬಿದ್ದಿದೆ.
ಏ.೧೪ರಂದು ನೂತನ ಭವನದಲ್ಲಿ ಮೊದಲ ಕಾರ್ಯಕ್ರಮ:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ನೂತನ ಭವನದಲ್ಲಿ ಏ.೧೪ರಂದು ಮೊದಲ ಕಾರ್ಯಕ್ರಮ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕ್‌ನಾಯ್ಕ್ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಚಿವರಾದ ಕೆ.ಸಿ ನಾರಾಯಣಗೌಡ, ಕೆ.ಎಸ್ ಈಶ್ವರಪ್ಪ, ಅರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಲ್ ಬೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ಗೋಪಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಎಸ್.ವಿ ಶಶಿಕುಮಾರ್ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಯಲಿದೆ.
No comments:
Post a Comment