Wednesday, April 13, 2022

ಸಚಿವ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಬಂಧಿಸಿ

ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಆಗ್ರಹ

ಭದ್ರಾವತಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಬುಧವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಲಾಯಿತು.
    ಭದ್ರಾವತಿ, ಏ. ೧೩: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಬುಧವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಲಾಯಿತು.
    ಗುತ್ತಿಗೆದಾರನ ಆತ್ಮಹತ್ಯೆಗೆ  ಸಚಿವರು ಕಾರಣಕರ್ತರಾಗಿದ್ದು, ಕಮಿಷನ್ ದಂಧೆ ಭ್ರಷ್ಟಾಚಾರದಿಂದ ಕಿರುಕುಳಕ್ಕೆ ಒಳಗಾಗಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವುದು ಡೆತ್ ನೋಟ್ ನಿಂದ ತಿಳಿದು ಬರುತ್ತಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಶೇ.೪೦ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡಿದೆ. ಈ ಹಿಂದೆಯೇ ಗುತ್ತಿಗೆದಾರರು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಭ್ರಷ್ಟಾಚಾರ ವ್ಯಾಪಕವಾಗಿರುವುದನ್ನು ಉಲ್ಲೇಖಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ನರೇಂದ್ರ ಮೋದಿಯವರು ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಬೇಸತ್ತು, ಕಿರುಕುಳ ತಾಳಲಾರದೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಆರೋಪಿಸಿದರು.
    ರಾಜ್ಯದೆಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಜನರ ಗಮನವನ್ನು ಬೇರಡೆಗೆ ಸೆಳೆಯಲು ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಮಾರಾಟಕ್ಕೆ ನಿಷೇಧ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸುತ್ತಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.  
    ಗುತ್ತಿಗೆದಾರನ ಆತ್ಮಹತ್ಯೆ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಸಚಿವ ಈಶ್ವರಪ್ಪನವರ ಭಾವಚಿತ್ರಕ್ಕೆ ಮಸಿ ಬಳಿದು ಕಾರ್ಯಕರ್ತರು ಆಕೋಶ ವ್ಯಕ್ತಪಡಿಸಿದರು.
    ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕ ಅಧ್ಯಕ್ಷ ಟಿ. ಚಂದ್ರೇಗೌಡ,  ಗ್ರಾಮಾಂತರ ಘಟಕ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಯುವ ಘಟಕ ನಗರಾಧ್ಯಕ್ಷ ವಿನೋದ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹಮದ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಬಿ.ಎಂ ಮಂಜುನಾಥ್, ಜಾರ್ಜ್, ಹಿಂದುಳಿದ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಮುಖಂಡರಾದ ಎಸ್.ಎಸ್ ಭೈರಪ್ಪ, ಎನ್. ಮಂಜುನಾಥ್, ಐಸಾಕ್, ರಮೇಶ್ ನಾಯ್ಕ, ಮೋಹನ್, ರೂಪ ನಾರಾಯಣ್, ಚಂದ್ರಪ್ಪ, ತಬ್ರೇಜ್ ಖಾನ್, ಅಮೋಸ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

No comments:

Post a Comment