Wednesday, April 13, 2022

ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ : ಹರಿದು ಭಕ್ತ ಸಮೂಹ

ಭದ್ರಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
    ಭದ್ರಾವತಿ, ಏ. ೧೩:  ತಾಲೂಕಿನ ಇತಿಹಾಸ ಪ್ರಸಿದ್ಧ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
    ಬೆಳಿಗ್ಗೆ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಮಂಗಳಾರತಿ, ಕೆಂಡಾರ್ಚನೆ ಹಾಗು ಸಂಜೆ ಶ್ರೀ ನಂಜುಂಡೇಶ್ವರ ಸ್ವಾಮಿಯ ರಥಾರೋಹಣ ನೆರವೇರಿತು. ಸಂಪ್ರದಾಯದಂತೆ ನಂಜುಂಡೇಶ್ವರ ಸ್ವಾಮಿಯ ಪಲ್ಲಕ್ಕಿ ಹೊತ್ತವರು ಮೊದಲು ಕೆಂಡ ಹಾಯ್ದರು. ನಂತರ ಅಕ್ಕಪಕ್ಕದ ಗ್ರಾಮಗಳಿಂದ ದೇವರುಗಳ ಪಲ್ಲಕ್ಕಿಯನ್ನು ಹೊತ್ತು ತಂದವರು ಸರದಿ ಸಾಲಿನಲ್ಲಿ ನಿಂತು ಕೆಂಡ ಹಾಯ್ದರು.
    ಜಾತ್ರಾ ಮಹೋತ್ಸವದ ಅಂಗವಾಗಿ ದಾನಿಗಳು, ಸೇವಾಕರ್ತರಾದ ಕುಮರಿನಾರಾಯಣಪುರದ ಎ. ಧರ್ಮೇಂದ್ರ ಅವರಿಂದ ಹೂವಿನ ಅಲಂಕಾರ, ಶಿವಮೊಗ್ಗ ಶ್ರೀ ನಂಜುಂಡೇಶ್ವರ ಪ್ರಾವಿಜನ್ ಸ್ಟೋರ್‍ಸ್, ಉಮಾ-ಎಂ. ಚಂದ್ರಶೇಖರ್ ಕುಟುಂಬದಿಂದ ಮಜ್ಜಿಗೆ ವಿತರಣೆ, ನಗರದ ಬಿ.ಎಚ್ ರಸ್ತೆ ಐಟಿಐ ಮುಂಭಾಗದ ಶ್ರೀ ಮಲ್ಲಿಕಾರ್ಜುನ ಸಾಮಿಲ್ ಶಶಿಕಲಾ-ಪರಶುರಾಮಪ್ಪ ಕುಟುಂಬದಿಂದ ದಾಸೋಹ ವ್ಯವಸ್ಥೆ ಕೈಗೊಳ್ಳಲಾಗಿತ್ತು.
    ಏ.೧೪ರ ಬೆಳಿಗ್ಗೆ ೫ ಗಂಟೆಗೆ ರಥೋತ್ಸವ, ಮಧ್ಯಾಹ್ನ ಓಕಳಿ, ಏ.೧೫ರ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ, ಸಿದ್ದರಪೂಜೆ, ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿದೆ.
    ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು:
    ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಬುಧವಾರ ರಾತ್ರಿ, ನಾಗತಿಬೆಳಗಲು ಗ್ರಾಮದ ಭೋವಿಕಾಲೋನಿ ಶ್ರೀ ನಂಜುಂಡೇಶ್ವರಸ್ವಾಮಿ ಯುವಕ ಸಂಘದಿಂದ ಕೋಲಾಟ ಮತ್ತು ಡೊಳ್ಳು, ರಾಜ್ಯ ಪ್ರಶಸ್ತಿ ವಿಜೇತ ಬಿ. ಪರಮೇಶ್ವರಪ್ಪ ಸಂಗಡಿಗರಿಂದ ವೀರಾಗಾಸೆ, ನಾಗತಿಬೆಳಗಲು ತಾಂಡ ಶ್ರೀ ನಂಜುಂಡೇಶ್ವರ ಸ್ವಾಮಿ ಯುವಕ ಸೇವಾಲಾಲ್ ಸಂಘ ಹಾಗು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ವಾಲ್ಯಾನಾಯ್ಕ ಸಂಗಡಿಗರಿಂದ ಕೋಲಾಟ ಮತ್ತು ಆರ್. ಭೀಮಾನಾಯ್ಕ ಸಂಗಡಿಗರಿಂದ ಡೊಳ್ಳು ಹಾಗು ಎಸ್.ಪಿ ಚಂದ್ರಪ್ಪ ಸಂಗಡಿಗರಿಂದ ಭಜನೆ ಮತ್ತು ಶ್ರೀ ಮುತ್ತು ಮಾರಿಯಮ್ಮ ಯುವಕ ಸಂಘದಿಂದ ಪಂಬೈ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
    ಜಾತ್ರೆಯಲ್ಲಿ ಯಾವುದೇ ಧರ್ಮದ ವ್ಯಾಪಾರಿಗಳಿಗೆ ನಿರ್ಬಂಧವಿಲ್ಲ:
    ನಾಗತಿಬೆಳಗಲು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದು, ಹಿಂದಿನಿಂದಲೂ ಜಾತ್ರೆಯನ್ನು ಯಾವುದೇ ಧರ್ಮ, ಜಾತಿ ಬೇಧಭಾವವಿಲ್ಲದೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಹ ಜಾತ್ಯಾತೀತವಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಎಲ್ಲಾ ಧರ್ಮದ ವ್ಯಾಪಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ  ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಹಾಗು ನಾಗತಿಬೆಳಗಲು, ಕುಮರಿನಾರಾಯಣಪುರ, ತಳ್ಳಿಕಟ್ಟೆ, ಬಾಬಳ್ಳಿ, ಗೌಡರಹಳ್ಳಿ, ಕಾಗೇಕೋಡಮಗ್ಗೆ, ಕೂಡ್ಲಿಗೆರೆ, ಹಳೇಸೀಗೇಬಾಗಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ  ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

No comments:

Post a Comment