ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಮೇ. ೩: ಜಗಜ್ಯೋತಿ ಬಸವಣ್ಣನವರ ವಿಚಾರಧಾರೆಗಳು ಕೇವಲ ಸಭೆ-ಸಮಾರಂಭಗಳಿಗೆ ಮೀಸಲಾಗಬಾರದು. ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಮಂಗಳವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಸಮಾಜಕ್ಕೆ ಸಮಾನತೆ ಪರಿಕಲ್ಪನೆ ತೋರಿಸಿಕೊಟ್ಟ ಮಹಾನ್ ಆದರ್ಶ ವ್ಯಕ್ತಿ ಬಸವಣ್ಣ ಎಂಬುದನ್ನು ಯಾರು ಸಹ ಮರೆಯಬಾರದು. ಬಸವಣ್ಣ ಹಾಗು ಅಂಬೇಡ್ಕರ್‌ರವರ ಚಿಂತನೆಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಜಾತಿ, ಧರ್ಮ, ಮತ ಪಂಥಗಳಿಲ್ಲದ ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕೆಂದರು.
ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಮಾತನಾಡಿ, ಜಗಜ್ಯೋತಿ ಬಸವಣ್ಣ, ಗೌತಮ ಬುದ್ಧ ಹಾಗು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಈ ಮೂವರು ಮಹಾನ್ ವ್ಯಕ್ತಿಗಳು ಸಮಾನತೆ ಪರಿಕಲ್ಪನೆಯೊಂದಿಗೆ ಸಮಾಜ ನಿರ್ಮಾಣಗೊಳ್ಳಬೇಕೆಂಬ ಆಶಯಗಳನ್ನು ಹೊಂದಿದ್ದರು. ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಪುರುಷ ಮತ್ತು ಮಹಿಳೆಯರ ನಡುವಿನ ತಾರತಮ್ಯ ದೂರವಾಗಿಸಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದರು. ಅನುಭವ ಮಂಟಪ ಇದಕ್ಕೆ ಸಾಕ್ಷಿಯಾಗಿದೆ. ಬಸವಣ್ಣನವರು ನುಡಿದಂತೆ ನಡೆದುಕೊಳ್ಳುವ ಮೂಲಕ ಆದರ್ಶ ವ್ಯಕ್ತಿಯಾಗಿ ಇಂದಿಗೂ ನಮ್ಮೆಲ್ಲರ ನಡುವೆ ಉಳಿದುಕೊಂಡಿದ್ದಾರೆ. ಇವರ ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಮಾತನಾಡಿ, ಬಸವಣ್ಣನವರು ಅಸ್ಪೃಶ್ಯತೆ, ಕಂದಾಚಾರ, ಮೂಡನಂಬಿಕೆ ಹಾಗೂ ಶೋಷಣೆಗಳ ವಿರುದ್ಧ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡರು. ನಂತರ ಅಂಬೇಡ್ಕರ್‌ರವರು ಇದಕ್ಕೆ ಪೂರಕವೆಂಬಂತೆ ಸಮಾಸಮಾನತೆಯ ಪರಿಕಲ್ಪನೆಯೊಂದಿಗೆ ಸಂವಿಧಾನ ರಚಿಸಿದರು. ಈ ಇಬ್ಬರು ಆದರ್ಶ ವ್ಯಕ್ತಿಗಳ ಚಿಂತನೆಗಳು ಒಂದೇ ಆಗಿದ್ದು, ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಮಾತನಾಡಿ, ಬಸವಣ್ಣನವರು ಸಮಾಜದಲ್ಲಿನ ಶೋಷಿತ ಸಮುದಾಯಗಳನ್ನು ಗುರುತಿಸಿದರು. ಜಾತಿ, ಧರ್ಮ, ಮತ ಪಂಥಗಳಿಲ್ಲದ ಕಾಯಕ ಸಮಾಜವನ್ನು ರೂಪಿಸಿದರು. ಆ ಮೂಲಕ ದಾಸೋಹದ ಪರಿಕಲ್ಪನೆ ತೋರಿಸಿಕೊಟ್ಟರು. ಪ್ರತಿಯೊಬ್ಬರು ತಮ್ಮ ಬದುಕುನ್ನು ತಮ್ಮ ದುಡಿಮೆಯಿಂದ ಸಾಗಿಸಬೇಕು. ಅನ್ಯಾಯ, ಅನೀತಿ, ಅಧರ್ಮದ ದಾರಿಯಲ್ಲಿ ಸಾಗದಂತೆ ಎಚ್ಚರಿಸಿದರು. ಭವಿಷ್ಯಕ್ಕೆ ಉತ್ತಮ ಸಮಾಜ ನಿರ್ಮಾಣದ ಪರಿಕಲ್ಪನೆ ರೂಪಿಕೊಟ್ಟರು. ಇವರು ರೂಪಿಸಿಕೊಟ್ಟಿರುವ ದಾರಿಯಲ್ಲಿ ಇಂದು ನಾವೆಲ್ಲರೂ ಸಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್ ಹಾಗು ಸದಸ್ಯರು, ತಾಲೂಕು ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್, ವಿವಿಧ ಸಂಘಟನೆಗಳ ಪ್ರಮುಖರಾದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಚಿನ್ನಯ್ಯ, ಎಸ್. ಮಂಜುನಾಥ್, ತೀರ್ಥಯ್ಯ, ಆರ್. ಮಹೇಶ್‌ಕುಮಾರ್, ಟಿ. ಚಂದ್ರೇಗೌಡ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಹಸೀಲ್ದಾರ್ ಆರ್. ಪ್ರದೀಪ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿಧ ಸರ್ಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವೀರಶೈವ ಲಿಂಗಾಯಿತ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ, ಮಹಿಳಾ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಸಭಾಭವನದವರೆಗೂ ವಿವಿಧ ಕಲಾತಂಡಗಳೊಂದಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.
No comments:
Post a Comment