ಭದ್ರಾವತಿ, ಜೂ. ೭: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನ್ಯೂಟೌನ್ ತರಂಗ ಕಿವುಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಳ್ಳುವ ಮೂಲಕ ವಿಕಲಚೇತನರಲ್ಲೂ ವಿಶೇಷ ಶಕ್ತಿ ಇದ್ದು, ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆಂದು ಶಾಲೆಯ ಅಧ್ಯಕ್ಷ ಡಾ. ಟಿ. ನರೇಂದ್ರ ಭಟ್ ಹೇಳಿದರು.
ಅವರು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಭದ್ರ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ಈ ಶಾಲೆ ಕಳೆದ ೩ ದಶಕಗಳಿಂದ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಮಕ್ಕಳು ತಾಯಿಯ ಗರ್ಭದಲ್ಲಿ ಬೆಳವಣಿಗೆ ಹಂತದಲ್ಲಿದ್ದಾಗ ಒಂದು ವೇಳೆ ತಾಯಿ ಅನಾರೋಗ್ಯಕ್ಕೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಅಥವಾ ಜನನ ಸಂದರ್ಭದಲ್ಲಿ ಉಂಟಾಗುವ ಕೆಲವು ನ್ಯೂನ್ಯತೆಗಳಿಂದಾಗಿ ಅಥವಾ ನಿರ್ಲಕ್ಷ್ಯತನದಿಂದಾಗಿ ವಿಕಲಚೇತನ ಮಕ್ಕಳು ಹುಟ್ಟುವುದು ಸಹಜ. ಇದು ಮಕ್ಕಳ ಶಾಪವಲ್ಲ. ಪೋಷಕರು ಇಂತಹ ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸಬೇಕು. ಟ್ರಸ್ಟ್ ಇಂತಹ ಮಕ್ಕಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಮುನ್ನಡೆಯುವುದು ವಿಶೇಷವಾಗಿದೆ ಎಂದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು ೭ ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.೧೦೦ರಷ್ಟು ಫಲಿತಾಂಶ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಕ್ಕಳ ಸಾಧನೆಯನ್ನು ಟ್ರಸ್ಟ್ ಅಭಿನಂದಿಸುತ್ತದೆ ಎಂದರು.
ಈ ಶಾಲೆಯ ಹಳೇಯ ವಿದ್ಯಾರ್ಥಿಗಳು ಹಾಗು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಸಿಬ್ಬಂದಿಗಳು ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶಾಲೆಯ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿರುವುದು ಸಂತಸವನ್ನುಂಟು ಮಾಡಿದೆ. ಈ ಶಾಲೆಯ ಸಾಧನೆ ಬಗ್ಗೆ ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಯನ್ನು ದತ್ತು ಪಡೆದು ಸಂಪೂರ್ಣವಾಗಿ ಅಭಿವೃಧ್ದಿಪಡಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಗರದ ಬೈಪಾಸ್ ರಸ್ತೆಯಲ್ಲಿರುವ ಮಠದ ಶಾಲಾ ಆವರಣದಲ್ಲಿ ನೂತನ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದಾರೆ. ಎಸ್‌ಎಸ್‌ಎಲ್‌ಸಿ ನಂತರ ಮಕ್ಕಳಿಗೆ ಸ್ವಯಂ ಉದ್ಯೋಗ ಆರಂಭಿಸಲು ನೆರವಾಗುವಂತೆ ವೃತ್ತಿಪರ ಶಿಕ್ಷಣ ನೀಡುವ ಉದ್ದೇಶವನ್ನು ಶ್ರೀಗಳು ಹೊಂದಿದ್ದಾರೆ ಎಂದರು.
ಡಾ.ಜಿ.ಎಂ ನಟರಾಜ್ ಮಾತನಾಡಿ, ಯಾವುದೇ ವಿದ್ಯಾ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗು ಅಭಿವೃದ್ಧಿ ಹೊಂದಲು ಆಡಳಿತ ಮಂಡಳಿ, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಮತ್ತು ಪೋಷಕರ ಸಹಕಾರ ಹೆಚ್ಚಿನದ್ದಾಗಿದೆ ಎಂದರು.
ಶಿವಮೊಗ್ಗ ಮೆಟ್ರೋ ಆಸ್ಪತ್ರೆ ಮುಖ್ಯಸ್ಥರಾದ ಡಾ. ತೇಜಸ್ವಿ, ಡಾ.ವೃಂದಾ ಭಟ್, ಡಾ. ಸೆಲ್ವರಾಜ್, ನಿತ್ಯಾನಂದ ಪೈ, ಅನಂತ ಕೃಷ್ಣ ನಾಯಕ್, ಸುಧಾಕರ್, ಸುಧೀಂದ್ರ, ಯುವರಾಜ್, ಮದಿಆಲಗನ್, ಎಸ್.ಎನ್ ಸುಭಾಷ್, ವೇಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೀಣಾ ಪ್ರಾರ್ಥಿಸಿ ತಾರಮಣಿ ಸ್ವಾಗತಿಸಿದರು. ಬಸವರಾಜ್ ವಂದಿಸಿದರು.
No comments:
Post a Comment