ಭದ್ರಾವತಿ, ಜು.14: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ 41ನೇ ಬಾರಿಗೆ ಪೂರ್ಣಗೊಂಡಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಯೊಳಗೆ ಜಲಾಶಯದಿಂದ ನೀರು ನದಿಗೆ ಬಿಡುಗಡೆಯಾಗಲಿದೆ.
ಜಲಾಶಯದ ಗರಿಷ್ಠ ಮಟ್ಟ 186 ಅಡಿಯಾಗಿದ್ದು, ಗುರುವಾರ ಬೆಳಗ್ಗೆ 6 ಗಂಟೆ ಮಾಹಿತಿಯಂತೆ 183.2 ಅಡಿ ತಲುಪಿದೆ. ಈ ಹಿನ್ನೆಲೆಯಲ್ಲಿ 4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗುವುದು. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಜಾನುವಾರುಗಳನ್ನು ನದಿ ತೀರದ ಪ್ರದೇಶಗಳಿಗೆ ಬಿಡದಂತೆ ಮತ್ತು ಸಾರ್ವಜನಿಕರು ತಿರುಗಾಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಹಸೀಲ್ದಾರ್ ಆರ್ ಪ್ರದೀಪ್ ತಿಳಿಸಿದ್ದಾರೆ.
ಮಲೆನಾಡಿನ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಭದ್ರಾ ಜಲಾಶಯ 1962ರಲ್ಲಿ ನಿರ್ಮಾಣಗೊಂಡಿದ್ದು, ಇರುವವರೆಗೆ 41 ಬಾರಿ ಪೂರ್ಣಗೊಂಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಮತ್ತು ಗದಗ ಸೇರಿದಂತೆ ಒಟ್ಟು 8 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಹೊಂದಿದೆ. ಬೃಹತ್ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಭದ್ರ ನದಿ ರೈತರು, ಕಾರ್ಮಿಕರ ಜೀವನದಿಯಾಗಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಾಗ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಇದರ ಸೌಂದರ್ಯ ಕಣ್ತುಂಬಿ ಕೊಳ್ಳುತ್ತಿದ್ದಾರೆ.
No comments:
Post a Comment