ಭದ್ರಾವತಿ, ಜು. ೧೩: ಭದ್ರಾ ಜಲಾಶಯ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯದಿಂದ ಯಾ
ವುದೇ ಕ್ಷಣದಲ್ಲಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಅಗತ್ಯವಿರುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ನೂತನ ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡಗೌಡರ್ ಹೇಳಿದರು.
ಅವರು ಬುಧವಾರ ಸಂಜೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಭದ್ರಾ ಜಲಾಶಯದಿಂದ ನೀರು ಹೊರಬಿಡುವ ಹಿನ್ನಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸ್ಥಳಗಳಲ್ಲಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಜೀವಹಾನಿ ಸಂಭವಿಸದಂತೆ ಎಚ್ಚರವಹಿಸಬೇಕು. ಪ್ರವಾಹದಿಂದ ಉಂಟಾಗುವ ಹೆಚ್ಚಿನ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಸಂತ್ರಸ್ಥರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೆ ನಿರ್ಲಕ್ಷ್ಯತನ ವಹಿಸಬಾರದು.
ಕಾಳಜಿ ಕೇಂದ್ರ ತೆರೆದು ತಗ್ಗು ಪ್ರದೇಶದಲ್ಲಿನ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಕಾರ ಪಡೆದುಕೊಳ್ಳಬೇಕು. ಸಂತ್ರಸ್ಥರಿಗೆ ಊಟದ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ನಡೆಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ನರಗಸಭೆ ಆಡಳಿತ ಹೆಚ್ಚಿನ ನಿಗಾ ವಹಿಸಬೇಕೆಂದರು. ಇದೆ ರೀತಿ ಅಗ್ನಿಶಾಮಕ ಇಲಾಖೆ ತುರ್ತು ಸೇವೆ ಒದಗಿಸಲು ಸಿದ್ದವಿರುವಂತೆ ಸೂಚಿಸಿದರು.
ಮಳೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿ ಕಾಂತರಾಜ್, ತಹಸೀಲ್ದಾರ್ ಆರ್. ಪ್ರದೀಪ್, ಗ್ರೇಡ್-೧ ತಹಸೀಲ್ದಾರ್ ರಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಲಾಶಯ ಭರ್ತಿಯಾಗಲು ಕ್ಷಣಗಣನೆ : ಮಧ್ಯ ರಾತ್ರಿ ನೀರು ಬಿಡುವ ಸಾಧ್ಯತೆ ?
ಗರಿಷ್ಠ ೧೮೬ ಅಡಿ ಎತ್ತರ ಹೊಂದಿರುವ ಜಲಾಶಯ ಈ ಬಾರಿ ಬಹುತೇಕ ಪೂರ್ಣಗೊಂಡಿದ್ದು, ಬುಧವಾರ ಮಧ್ಯ ರಾತ್ರಿ ನೀರು ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಬೆಳಿಗ್ಗೆ ೬ ಗಂಟೆ ಮಾಹಿತಿಯಂತೆ ಜಲಾಶಯದ ನೀರಿನ ಮಟ್ಟ ೧೮೦.೨ ಅಡಿಗೆ ಏರಿಕೆಯಾಗಿದೆ. ಭರ್ತಿಗೆ ಕೇವಲ ೬ ಅಡಿ ಮಾತ್ರ ಬಾಕಿ ಉಳಿದಿದ್ದು, ೩೫.೩೨೧ ಕ್ಯೂಸೆಕ್ ಒಳಹರಿವು ಹೊಂದಿದೆ. ಈ ಹಿನ್ನಲೆಯಲ್ಲಿ ಮಧ್ಯ ರಾತ್ರಿ ವೇಳೆಗೆ ಜಲಾಶಯ ಭರ್ತಿಯಾಗಲಿದ್ದು, ನೀರು ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ವರ್ಷ ಕೇವಲ ೧೫೬.೮ ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಪ್ರಸ್ತುತ ಕಳೆದ ವರ್ಷಕ್ಕಿಂತ ೨೪ ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಈಗಾಗಲೇ ಕಾಲುವೆಗಳಿಗೆ ೧೦ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಕಂಡು ಬರುತ್ತಿದೆ. ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರತಿವರ್ಷ ನಗರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವುದು ಸಾಮಾನ್ಯವಾಗಿದೆ.
No comments:
Post a Comment