Friday, July 15, 2022

ಭದ್ರಾ ನದಿಯಲ್ಲಿ ಪ್ರವಾಹ : ೧೫೦ಕ್ಕೂ ಹೆಚ್ಚು ಮನೆಗಳು ಜಲಾವೃತ

ಭದ್ರಾವತಿ ನಗರಸಭೆ ೨ನೇ ವಾರ್ಡಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿ ಪ್ರವಾಹದಿಂದಾಗಿ ಸುಮಾರು ೩೨ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿರುವುದು.
    ಭದ್ರಾವತಿ, ಜು. ೧೫: ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ನಗರ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ತೀರದ ತಗ್ಗು ಪ್ರದೇಶದಲ್ಲಿನ ೧೫೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಪ್ರವಾಹ ನಿಯಂತ್ರಿಸುವಲ್ಲಿ ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
      ಗುರುವಾರ ಮಧ್ಯಾಹ್ನ ಜಲಾಶಯದಿಂದ ೪ ಕ್ರೆಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗಿತ್ತು. ಸಂಜೆ ೬ ಗಂಟೆ ವೇಳೆಗೆ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದ್ದು, ಹಳೇಸೇತುವೆ ಸಮೀಪದಲ್ಲಿರುವ ಸಂಗಮೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಗೊಂಡಿತು. ರಾತ್ರಿ ೮ ಗಂಟೆ ವೇಳೆಗೆ ಹೊಸಸೇತುವೆ ಸಹ ಮುಳುಗಡೆಗೊಂಡ ಹಿನ್ನಲೆಯಲ್ಲಿ ಸೇತುವೆ ಎರಡು ಬದಿಯಲ್ಲೂ ಬ್ಯಾರಿಗೇಡ್‌ಗಳನ್ನು ಅಳವಡಿಸಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.


ಭದ್ರಾವತಿ ನಗರಸಭೆ ೩ನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ ಭದ್ರಾ ನದಿ ಪ್ರವಾದಿಂದಾಗಿ ಸಂತ್ರಸ್ಥರಾದವರು ಮಕ್ಕಳುಮರಿಗಳೊಂದಿಗೆ ಕಾಳಜಿ ಕೇಂದ್ರಗಳಿಗೆ ತೆರಳುತ್ತಿರುವುದು.

      ತಗ್ಗು ಪ್ರದೇಶದಲ್ಲಿನ ೧೫೦ಕ್ಕೂ ಹೆಚ್ಚು ಮನೆಗಳಿಗೆ ನೀರು:
      ರಾತ್ರಿ ೧೦ ಗಂಟೆಯ ನಂತರ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಇದರಿಂದಾಗಿ ನಗರಸಭೆ ವ್ಯಾಪ್ತಿಯ ಸುಣ್ಣದಹಳ್ಳಿಯಲ್ಲಿ ಸುಮಾರು ೨, ಗುಂಡೂರಾವ್ ಶೆಡ್‌ನಲ್ಲಿ ಸುಮಾರು ೨೦, ಎಕಿನ್ಸಾ ಕಾಲೋನಿಯಲ್ಲಿ ಸುಮಾರು ೪೦, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ನಗರದಲ್ಲಿ ಸುಮಾರು ೬೦ ಹಾಗು ಕವಲಗುಂದಿ ಎ.ಕೆ ಕಾಲೋನಿಯಲ್ಲಿ ಸುಮಾರು ೩೨ ಮನೆಗಳು ಸೇರಿದಂತೆ ಒಟ್ಟು ೧೫೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ರಾತ್ರಿಯೇ ಕಾರ್ಯಾಚರಣೆಗೆ ಮುಂದಾದ ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತ ಸಿಬ್ಬಂದಿಗಳು ಪ್ರವಾಹ ಪೀಡಿತ ಸಂತ್ರಸ್ಥರಿಗೆ ಕಾಳಜಿ ಕೇಂದ್ರಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾದರು.
       ೩ ಕಾಳಜಿ ಕೇಂದ್ರ, ೨೫೦ಕ್ಕೂ ಹೆಚ್ಚು ಮಂದಿ ಆಶ್ರಯ :
      ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟ, ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆ ಮತ್ತು ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಒಟ್ಟು ೩ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.
      ವಯೋವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೨೫೦ಕ್ಕೂ ಹೆಚ್ಚು ಮಂದಿ ತಾತ್ಕಾಲಿಕ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದು, ಈ ನಡುವೆ ೩ ಕಾಳಜಿ ಕೇಂದ್ರಗಳಲ್ಲೂ ನವಜಾತ ಶಿಶುಗಳೊಂದಿಗೆ ಬಾಣಂತಿ ಮಹಿಳೆಯರಿದ್ದು, ಅವರ ಪರದಾಟ ಹೇಳತಿಹದು. ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜೊತೆಗೆ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಗುರುವಾರ ರಾತ್ರಿಯೇ ನಗರಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವವರ ಸಂಕಷ್ಟಗಳನ್ನು ಆಲಿಸಿದರು.


ಭದ್ರಾ ನದಿ ಪ್ರವಾಹದಿಂದಾಗಿ ಸಂತ್ರಸ್ಥರಾಗಿರುವ ಕವಲಗುಂದಿ ಎ.ಕೆ ಕಾಲೋನಿ ನಿವಾಸಿಗಳು ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವುದು.

      ಶಾಸಕ ಬಿ.ಕೆ ಸಂಗಮೇಶ್ವರ್ ಪರಿಶೀಲನೆ :
      ಶಾಸಕ ಬಿ.ಕೆ ಸಂಗಮೇಶ್ವರ್ ಶುಕ್ರವಾರ ಬೆಳಿಗ್ಗೆ ಪ್ರವಾಹ ಪೀಡಿತ ಪ್ರದೇಶಗಳಾದ ಸುಣ್ಣದಹಳ್ಳಿ, ಗುಂಡೂರಾವ್ ಶೆಡ್, ಎಕಿನ್ಸಾ ಕಾಲೋನಿ, ಅಂಬೇಡ್ಕರ್ ನಗರ ಮತ್ತು ಕಲವಗುಂದಿ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಸಂತ್ರಸ್ಥರ ಸಂಕಷ್ಟಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಸಂತ್ರಸ್ಥರಿಗೆ ಕಾಳಜಿ ಕೇಂದ್ರಗಳಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
      ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
      ಶಾಸಕರ ವಿರುದ್ಧ ಸಂತ್ರಸ್ಥರ ಆಕ್ರೋಶ :
      ಶಾಸಕ ಬಿ.ಕೆ ಸಂಗಮೇಶ್ವರ್ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಪ್ರವಾಹ ಪೀಡಿತ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ ಪ್ರದೇಶದಲ್ಲಿ ಅಲ್ಲಿನ ನಿವಾಸಿಗಳು, ಸಂತ್ರಸ್ಥರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಆದರೂ ಸಹ ಇದುವರೆಗೂ ಯಾರು ಗಮನ ಹರಿಸಿಲ್ಲ. ಪ್ರತಿ ವರ್ಷ ಪ್ರವಾಹಕ್ಕೆ ಒಳಗಾಗುವುದು ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಭದ್ರಾ ನದಿ ಪ್ರವಾಹದಿಂದಾಗಿ ಹೊಸ ಸೇತುವೆ ಮುಳುಗಡೆಗೊಂಡಿರುವುದನ್ನು ವೀಕ್ಷಿಸಲು ಆಗಮಿಸಿರುವ ಜನರ ದಂಡು.
      ಮುಳುಗಡೆಗೊಂಡ ಹೊಸ ಸೇತುವೆ ವೀಕ್ಷಿಸಲು ಜನರ ದಂಡು :
      ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಹೊಸಸೇತುವೆ ಗುರುವಾರ ರಾತ್ರಿಯಿಂದ ಮುಳುಗಡೆಗೊಂಡಿದ್ದು, ಸೇತುವೆಯನ್ನು ವೀಕ್ಷಿಸಲು ನಗರದ ವಿವಿಧೆಡೆಗಳಿಂದ ಜನರ ದಂಡು ಆಗಮಿಸುತ್ತಿದೆ. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಕಂಡು ಬಂದರೇ, ಮತ್ತೆ ಕೆಲವರು ಸೆಲ್ಫಿ ತೆಗೆದುಕೊಳ್ಳುವುದು ಕಂಡು ಬಂದಿತು.
      ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದ್ದು, ಪ್ರವಾಹ ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿನ ನಿವಾಸಿಗಳಿಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ. ಸೇತುವೆ ಎರಡು ಬದಿಯಲ್ಲೂ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದೆ.


ಭದ್ರಾ ನದಿ ಪ್ರವಾಹದಿಂದಾಗಿ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿರುವ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿರುವುದು.
      ವಾಹನ ದಟ್ಟಣೆ :
      ಪ್ರವಾಹದಿಂದ ಹೊಸಸೇತುವೆ ಮುಳುಗಡೆಗೊಂಡಿರುವ ಹಿನ್ನಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಎಲ್ಲಾ ವಾಹನಗಳು ಹಳೇ ಸೇತುವೆ ಮೇಲೆ ಸಂಚರಿಸುವಂತಾಗಿದೆ. ಬಿ.ಎಚ್ ರಸ್ತೆ ಹಾಗು ಸಿ.ಎನ್ ರಸ್ತೆ ಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ. ಕಳೆದ ಸುಮಾರು ೪ ವರ್ಷಗಳಿಂದ ಹಳೇ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಸೇತುವೆ ಕಾಮಗಾರಿ ಶೇ.೮೦ರಷ್ಟು ಮುಕ್ತಾಯಗೊಂಡಿದೆ. ಈ ಸೇತುವೆ ಪೂರ್ಣಗೊಂಡಲ್ಲಿ ಸಂಚಾರ ದಟ್ಟಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ.      

No comments:

Post a Comment