Friday, July 15, 2022

ಭದ್ರಾ ನದಿ ತಡೆಗೋಡೆ ನಿರ್ಮಾಣದ ಪ್ರಸ್ತಾವನೆಗೆ ಸ್ಪಂದಿಸದ ಸರ್ಕಾರ : ಕೇವಲ ೮ ಕೋ. ಬಿಡುಗಡೆ

ಭದ್ರಾವತಿಯಲ್ಲಿ ಭದ್ರಾ ನದಿಯಿಂದ ಉಂಟಾಗಿರುವ ಪ್ರವಾಹ ಪೀಡಿತ ಸ್ಥಳಕ್ಕೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ಪರಿಶೀಲನೆ ನಡೆಸಿ ಸಂತ್ರಸ್ಥರ ಸಂಕಷ್ಟ ಆಲಿಸಿದರು.
    ಭದ್ರಾವತಿ, ಜು. ೧೫: ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಭದ್ರಾ ನದಿಯಿಂದ ಪ್ರವಾಹ ತಪ್ಪಿಸಲು ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಹಲವಾರು ಬಾರಿ ಒತ್ತಾಯಿಸಿದ್ದು, ಆದರೆ ಇದುವರೆಗೂ ಪೂರಕವಾಗಿ ಸ್ಪಂದಿಸಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
      ಅವರು ಶುಕ್ರವಾರ ಭದ್ರಾ ನದಿಯಿಂದ ಉಂಟಾದ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ಥರ ಸಂಕಷ್ಟಗಳನ್ನು ಆಲಿಸಿ ಮಾತನಾಡಿದರು. ೨ನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿಯೇ ಕವಲಗುಂದಿಯಿಂದ ತರೀಕೆರೆ ರಸ್ತೆಯ ಖಬರ್‌ಸ್ತಾನದವರೆಗೆ ತಡೆಗೋಡೆ ನಿರ್ಮಿಸುವಂತೆ ೧೩೮ ಕೋ.ರು. ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ ಕೇವಲ ೮ ಕೋ.ರು. ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿಯೇ ಇದೀಗ ಎರಡು ಭಾಗಗಳಲ್ಲಿ ಸ್ವಲ್ಪ ಸ್ವಲ್ಪ ತಡೆಗೋಡೆ ನಿರ್ಮಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ತಗ್ಗು ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣಗೊಳ್ಳಲಿದೆ ಎಂದರು.
      ಪ್ರತಿ ವರ್ಷ ಮುಳುಗಡೆಗೊಳ್ಳುತ್ತಿರುವ ಹೊಸಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ಮಂಜೂರಾತಿಯಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.
      ನಗರ ಹಾಗು ಗ್ರಾಮಾಂತರ ಭಾಗಗಳಲ್ಲಿ ಮಳೆಯಿಂದ ಉಂಟಾದ ಹಾನಿಗೆ ಸರ್ಕಾರ ನಿಗದಿಪಡಿಸಿರುವ ಪರಿಹಾರ ಧನವನ್ನು ಸಂತ್ರಸ್ಥರಿಗೆ ತಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ತಹಸೀಲ್ದಾರ್‌ರವರು ಹೆಚ್ಚಿನ ಗಮನ ನೀಡಬೇಕು. ಅಲ್ಲದೆ ಮಳೆಯಿಂದ ಉಂಟಾಗುವ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂದರು.

No comments:

Post a Comment