Friday, July 15, 2022

ವಿಐಎಸ್‌ಎಲ್ ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆಯಿಂದ ಹೊರಗೆ : ಆಶಾದಾಯಕ ಬೆಳವಣಿಗೆ

 ೩೦೦ ಕೋ. ರು. ಬಂಡವಾಳ ತೊಡಗಿಸಲು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮನವಿ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಪದಾಧಿಕಾರಿಗಳು, ನಿರ್ದೇಶಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜು. ೧೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆ ಮೂಲಕ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದ್ದು, ಇದೀಗ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಪ್ರಸ್ತುತ ಕಾರ್ಖಾನೆಯ ಉತ್ಪಾದನೆಯಲ್ಲಿ ಬೆಳವಣಿಗೆ ಸಾಧಿಸಲು ಉಕ್ಕು ಪ್ರಾಧಿಕಾರ ಕೇವಲ ೩೦೦ ಕೋ.ರು. ಬಂಡವಾಳ ತೊಡಗಿಸಲು ಮುಂದಾಗಬೇಕೆಂದು ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮನವಿ ಮಾಡಿದರು.
      ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೀಗ ಕಾರ್ಖಾನೆ ಆಶಾದಾಯಕ ದಿನಗಳನ್ನು ಎದುರು ನೋಡುವಂತಾಗಿದೆ. ಕೇಂದ್ರ ಸರ್ಕಾರ ೨೦೧೬ರಲ್ಲಿ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆ ಮೂಲಕ ಖಾಸಗೀಕರಣಗೊಳಿಸುವ ಪ್ರಯತ್ನಕ್ಕೆ ಮುಂದಾಯಿತು. ಆದರೆ ಯಾವುದೇ ಖಾಸಗಿ ಮಾಲೀಕರು ಕಾರ್ಖಾನೆಯನ್ನು ಕೊಂಡುಕೊಳ್ಳಲು ಮುಂದೆ ಬರಲಿಲ್ಲ. ಸರ್ಕಾರದ ಪ್ರಯತ್ನ ವಿಫಲವಾಯಿತು. ಇದೀಗ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆಯಿಂದ ಹೊರಗಿಡಲು ಸಂಬಂಧಪಟ್ಟ ಪ್ರಾಧಿಕಾರ ಸೂಚಿಸಿದ್ದು, ಇದು ಕಾರ್ಖಾನೆಯ ಆಶಾದಾಯಕ ಬೆಳೆವಣಿಗೆಯಾಗಿದೆ. ನಮ್ಮೆಲ್ಲರ ಹೋರಾಟ ಯಶಸ್ವಿಯಾದಂತಾಗಿದೆ ಎಂದರು.
      ಪ್ರಸ್ತುತ ಕಾರ್ಖಾನೆಯನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕೆಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೇಂದ್ರ ಸರ್ಕಾರ ೨೦೧೬ರಲ್ಲಿ ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆ ಮೂಲಕ ಖಾಸಗೀಕರಣಗೊಳಿಸುವ ಪ್ರಯತ್ನಕ್ಕೆ ಮುಂದಾದ ಹಿನ್ನಲೆಯಲ್ಲಿ ಪ್ರತಿ ವರ್ಷ ೧೫೦ ಕೋ. ರು. ನಷ್ಟ ಅನುಭವಿಸುವಂತಾಯಿತು. ನಂತರದ ದಿನಗಳಲ್ಲಿ ಕಾರ್ಖಾನೆಯಲ್ಲಿ ಹೆಚ್ಚಿನ ಶ್ರಮವಹಿಸಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಲಾಭದ ದಾರಿಯಲ್ಲಿ ಸಾಗುತ್ತಿದ್ದು, ನಷ್ಟದ ಪ್ರಮಾಣ ೩೦ ರಿಂದ ೪೫ ಕೋ.ರು. ಗಳಿಗೆ ಕಡಿಮೆಗೊಳಿಸಲಾಗಿದೆ. ನಷ್ಟದಲ್ಲೂ ಲಾಭ ಕಂಡುಕೊಳ್ಳಲಾಗುತ್ತಿದೆ. ಉಕ್ಕು ಪ್ರಾಧಿಕಾರ ೨೦೨೧-೨೨ನೇ ಸಾಲಿನಲ್ಲಿ ೧೨,೦೧೫ ಕೋ. ರು. ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ ದೆಶದಲ್ಲಿ ಉಕ್ಕು ವಲಯವನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕೆ ಪೂರಕವೆಂಬಂತೆ ಉಕ್ಕು ಪ್ರಾಧಿಕಾರ ೧.೫ ಲಕ್ಷ ಕೋಟಿ ಬಂಡವಾಳ ತೊಡಗಿಸಲು ಮುಂದಾಗಿದೆ. ಈ ಬಂಡವಾಳದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಕೇವಲ ೩೦೦ ಕೋ.ರು ತೊಡಗಿಸಿದರೆ ಸಾಕು ಕಾರ್ಖಾನೆ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಈಗಾಗಲೇ ಈ ಸಂಬಂಧ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಈ ಕುರಿತು ಸಂಸದ ಬಿ.ವೈ ರಾಘವೇಂದ್ರ ಅವರೊಂದಿಗೆ ಚರ್ಚಿಸಲಾಗಿದೆ. ರಾಜ್ಯದ ಎಲ್ಲಾ ಸಂಸದರು, ಸಚಿವರು, ಕೇಂದ್ರ ಉಕ್ಕು ಸಚಿವರ ಗಮನಕ್ಕೆ ತರಲಾಗಿದೆ ಎಂದರು.
      ರಾಜ್ಯ ಸರ್ಕಾರ ೨೦೧೯ರಲ್ಲಿ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆ ರಮಣದುರ್ಗದಲ್ಲಿ ೧೫೦ ಎಕರೆ ಕಬ್ಬಿಣದ ಅದಿರಿನ ಗಣಿ ಮಂಜೂರಾತಿ ಮಾಡಿದ್ದು, ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಪ್ರಯತ್ನಿಸಿದ ಹಿನ್ನಲೆಯಲ್ಲಿ ಗಣಿ ಮಂಜೂರಾತಿ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಾಯಿತು. ಈಗಾಗಲೆ ಈ ಅದಿರು ಗಣಿ ಅಭಿವೃದ್ಧಿಗೆ ೫ ಕೋ.ರು. ಬಂಡವಾಳವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ಅನುದಾನದಲ್ಲಿ ೪ ಕೋ. ರು. ಬಳಸಿಕೊಂಡು ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆದು ಮುಂದಿನ ಎರಡೂವರೆ ವರ್ಷದಲ್ಲಿ ಅದಿರು ಉತ್ಪಾದನೆ ಕೈಗೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಅದಿರು ಕಾರ್ಖಾನೆಗೆ ಲಭ್ಯವಾದ ನಂತರ ಅನುಸರಿಸಬೇಕಾದ ಉತ್ಪಾದನಾ ಕ್ರಮಗಳ ಕುರಿತು ಈಗಾಗಲೇ ರೂಪುರೇಷೆ ಸಹ ಸಿದ್ದಪಡಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಕಾರ್ಖಾನೆ ಆಶಾದಾಯಕ ದಿನಗಳನ್ನು ಎದುರು ನೋಡುವ ಬೆಳವಣಿಗೆಯನ್ನು ಉಂಟುಮಾಡಿವೆ ಎಂದು ಸಂತಸ ವ್ಯಕ್ತಪಡಿಸಿದರು.
      ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಯು.ಎ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು, ಖಜಾಂಚಿ ಎಸ್. ಮೋಹನ್, ನಿರ್ದೇಶಕರಾದ ಕುಮಾರಸ್ವಾಮಿ, ಯೋಗೇಶ್, ಸುನಿಲ್‌ಕುಮಾರ್, ರಾಜು, ಮಂಜುನಾಥ್, ಮನೋಹರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





No comments:

Post a Comment